ಮಂಡ್ಯ: ಕ್ಷುಲ್ಲಕ ವಿಚಾರಕ್ಕೆ ಪೊಲೀಸ್ ಪೇದೆಯೊಬ್ಬ ಸರ್ಕಾರಿ ಪಶು ಆಸ್ಪತ್ರೆಯ ಡಿ ಗ್ರೂಪ್ ನೌಕರನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ನಗರದ ಹೊಸಹಳ್ಳಿ ಬಡಾವಣೆಯ ಪಶು ಆಸ್ಪತ್ರೆಯಲ್ಲಿ ನಡೆದಿದೆ.
ಬಸವರಾಜು (58) ಹಲ್ಲೆಗೊಳಗಾದ ಪಶು ಆಸ್ಪತ್ರೆಯ ಡಿ-ಗ್ರೂಪ್ ನೌಕರ. ಚಿದು ಹಲ್ಲೆ ನಡೆಸಿದ ಪೊಲೀಸ್ ಪೇದೆಯಾಗಿದ್ದಾರೆ. ಇಬ್ಬರೂ ವಿನಾಯಕ ಬಡಾವಣೆಯ ಅಕ್ಕಪಕ್ಕದ ಮನೆಯವರಾಗಿದ್ದು, ಸಣ್ಣ-ಪುಟ್ಟ ವಿಚಾರಕ್ಕೆ ಮೊದಲಿನಿಂದಲೂ ಗಲಾಟೆ ನಡೆಯುತ್ತಿತ್ತು. ಇಂದು ಸಹ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಪೇದೆ, ಬಸವರಾಜು ಕೆಲಸ ಮಾಡುವ ಆಸ್ಪತ್ರೆಗೆ ನುಗ್ಗಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಸವರಾಜು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಠಾಣಾ ಪೊಲೀಸರು ಪೇದೆಯನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv