ನೆಲಮಂಗಲ: ಹೊಸ ವರ್ಷದ ದಿನವೇ ಪೋಸ್ಕೋ ಪ್ರಕರಣದ ಆರೋಪಿ ಜೈಲು ಪಾಲಾಗಿ ಶಿಕ್ಷೆ ಅನುಭವಿಸುತ್ತಿದ್ದನು. ಇದಕ್ಕೆ ಪ್ರತಿರೋಧವಾಗಿ ಆ ಪ್ರಕರಣವನ್ನ ವಾಪಸ್ ಪಡೆಯುವಂತೆ ಆರೋಪಿಯ ಬೆಂಬಲಿಗರ ತಂಡ ಸಂತ್ರಸ್ತೆಯ ಕುಟುಂಬದ ಮಹಿಳೆಯ ಸೀರೆ ಹರಿದು ಪೈಶಾಚಿಕ ಕೃತ್ಯ ನಡೆಸಿದ್ದಾರೆ.
ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಕೂಲಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ವಾಸವಿದ್ದ ಸಂತ್ರಸ್ತೆಯ ಕುಟುಂಬದ ಮನೆಯ ಮೇಲೆ ದಾಳಿ ಸುಮಾರು 20ಕ್ಕೂ ಹೆಚ್ಚು ಮಂದಿ ಮನೆಯಲ್ಲಿದ್ದ ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮಹಿಳೆಯ ಸೀರೆ ಎಳೆದಾಡಿ ಹರಿದು, ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಪೋಸ್ಕೊ ಪ್ರಕರಣದಲ್ಲಿ ದೂರು ನೀಡಿದ್ದರು. ಹೀಗಾಗಿ ಈ ದೂರನ್ನ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತಿದ್ದಂತೆ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಕ್ಕಳ ಸಮಿತಿಯ ಅಧ್ಯಕ್ಷ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿಯನ್ನ ಮಾಡಿದ್ದಾರೆ.