ಕಾರವಾರ: ತಮ್ಮ ಮಗಳ ಅಪಹರಣವಾಗಿದೆಯೆಂದು ಠಾಣೆಗೆ ದೂರು ನೀಡಲು ಹೋಗಿದ್ದ ಪೋಷಕರಿಗೆ ಠಾಣಾಧಿಕಾರಿ ಬಂಧಿಸುವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ವಿರುದ್ಧ ಕ್ರಮ ಕಗೊಳ್ಳುವಂತೆ ಬೆಳಗಾವಿ ಪೊಲೀಸ್ ದೂರು ಪ್ರಾಧಿಕಾರ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಹರಾ ಠಾಣೆಯ ಪಿಎಸ್‍ಐ ಆಗಿದ್ದ ಆಂಜನೇಯ ಪ್ರಸ್ತುತ ಕಾರವಾರದ ಡಿಎಸ್‍ಆರ್‍ಬಿಯ ಸಿಪಿಐ ಆಗಿದ್ದಾರೆ. ಆಂಜನೇಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಲಾಗಿದೆ.
ಏನಿದು ಪ್ರಕರಣ?2015ರಲ್ಲಿ ಬೈತಕೂಲ್‍ನ ನಿವಾಸಿ ಶಶಿಕಾಂತ್ ರೇವಲ್ಕರ್ ಹಾಗೂ ಟ್ರೀಜಾ ದಂಪತಿ ತಮ್ಮ ಅಪ್ರಾಪ್ತ ಮಗಳ ಅಪಹರಣವಾಗಿದೆಯೆಂದು ದೂರು ನೀಡಲು ಹೋಗಿದ್ದರು. ಆದ್ರೆ ಅಂದಿನ ಠಾಣೆಯ ಪಿಎಸ್‍ಐ ಆಗಿದ್ದ ಆಂಜನೇಯ, ನಿಮ್ಮ ಮಗಳಿಗೆ ಉತ್ತಮ ಸಂಸ್ಕಾರ ನೀಡದ ಕಾರಣ ಅಪಹರಣವಾಗಿದ್ದು ನಿಮ್ಮ ವಿರುದ್ಧ ದೂರು ದಾಖಲಿಸಲು ನಮಗೆ ಅಧಿಕಾರವಿದೆ. ಮಕ್ಕಳು ಓಡಿಹೋದರೆ ಪೋಷಕರಿಗೆ ಶಿಕ್ಷೆ ನೀಡುವ ಕಾನೂನು ಇದೆ ಎಂದು ಸುಳ್ಳು ಹೇಳಿ ದೂರು ನೀಡದಂತೆ ಬೆದರಿಸಿ ಕಳಿಸಿದ್ದರು.
ಈ ಸಂಬಂಧ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವನಾಯ್ಕ ಬೆಳಗಾವಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಇದೀಗ ಎರಡು ವರ್ಷಗಳ ನಂತರ ಅಂದಿನ ಪಿಎಸ್‍ಐ ಆಗಿದ್ದ ಆಂಜನೇಯ ಕರ್ತವ್ಯಲೋಪವೆಸಗಿದ್ದು ಸಾಬೀತಾಗಿದ್ದು ಕ್ರಮ ಜರುಗಿಸಲು ಆದೇಶ ಮಾಡಲಾಗಿದೆ.