ಉಡುಪಿ: ಪೊಲೀಸ್ ಕಾನ್ಸ್ ಸ್ಟೇಬಲ್ ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕ ಗೆಸ್ಟ್ ಹೌಸ್ ನಲ್ಲಿ ನಡೆದಿದಿರುವ ಬಗ್ಗೆ ಬೆಳಕಿಗೆ ಬಂದಿದೆ.
27 ವರ್ಷದ ನಾಗರಾಜ್ ಆತ್ಮಹತ್ಯೆಗೆ ಶರಣಾಗಿರೋ ಪೇದೆಯಾಗಿದ್ದು, ಇವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ನಾಗರಾಜ್ ಜೊತೆ ಕೋಣೆಯಲ್ಲಿ ತಂಗುತ್ತಿದ್ದ ಇನ್ನೋರ್ವ ಪೇದೆ ಸಂದೀಪ್ ಎಂಬವರು ಕೆಲಸ ನಿಮಿತ್ತ ಶನಿವಾರ ಗಂಗೊಳ್ಳಿಗೆ ತೆರಳಿ ರಾತ್ರಿ ಪಾಳಿಯ ಬಳಿಕ ಇಂದು ಬೆಳಿಗ್ಗೆ ಕೋಣೆಗೆ ಮರಳಿದಾಗ ನಾಗರಾಜ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ನಾಗರಾಜ್ ಅವರು ಮೂರು ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾವಣಗೆರೆಯ ಮಲೆಬೆನ್ನೂರು ಮೂಲದ ನಾಗರಾಜ್ ಅವರು 2014ರಲ್ಲಿ ಪೊಲೀಸ್ ಪೇದೆಯಾಗಿದ್ದು, ಅವರು ಜೋಯ್ಡಾಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಬಂದಿದ್ದ ಅವರು ಇದೀಗ ದಿಢೀರ್ ಆತ್ಮಹತ್ಯೆಗೆ ಶರಣಾಗಿರುವುದು ನಿಗೂಢವಾಗಿದೆ.
ನಾಗರಾಜ್ ಅವರ ಮದುವೆ ನಿಗದಿಯಾಗಿತ್ತು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.