ಬೆಂಗಳೂರು: ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
5 ಮಂದಿ ಖದೀಮರು ಗಾಂಜಾ ಮತ್ತಿನಲ್ಲಿ ರಸ್ತೆಯಲ್ಲಿ ಬರುವ ಬೈಕ್ ಸವಾರರನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಹಣ ದೋಚುತ್ತಿದ್ದರು. ಸ್ವಿಫ್ಟ್ ಕಾರ್ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ದರೋಡೆಕೋರರ ಬಂಧನಕ್ಕೆ ಪೊಲೀಸರು ತೆರಳಿದ್ದರು.
Advertisement
ಪೊಲೀಸರು ಬರುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು ಕಾರಿನಲ್ಲಿ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕೂಡ ಕಾರನ್ನು ಚೇಸ್ ಮಾಡಿದ್ದಾರೆ. ಪೊಲೀಸರು ಕಾರು ಚೇಸ್ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಆನೇಕಲ್ ಸಬ್ ಇನ್ಸ್‍ಪೆಕ್ಟರ್ ಹೇಮಂತ್ 2 ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಓರ್ವ ಆರೋಪಿಯ ಕಾಲಿಗೆ ಬಿದ್ದರೆ, ಮತ್ತೊಂದು ಕಾರಿನ ಚಕ್ರಕ್ಕೆ ಬಿದ್ದಿದೆ.
Advertisement
ಈ ಘಟನೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಗ್ಯಾಂಗ್ ಲೀಡರ್ ಅರುಣ್ ಹಾಗೂ ಮತ್ತೋರ್ವ ಆರೋಪಿ ಪರಾರಿ ಆಗಿದ್ದಾರೆ. ಸದ್ಯ ಪೊಲೀಸರು ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.