ರಾಯಚೂರು: ಮಧ್ಯ ರಸ್ತೆಯಲ್ಲಿಯೇ ನಿಂತು ಓಡಾಡುವ ಭಾರದ ವಾಹನಗಳಿಂದ ಪೊಲೀಸರು ಕೈಚಾಚಿ ದುಡ್ಡು ವಸೂಲಿ ಮಾಡುತ್ತಿರೋ ಪ್ರಕರಣವೊಂದು ರಾಯಚೂರಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ಈ ರೀತಿ ಭ್ರಷ್ಟರಾಗಿದ್ದಾರೆ. ದಿನ ಬೆಳಗಾದರೆ ಸಾಕು ಸ್ಟೇಷನ್ ರಸ್ತೆಯಲ್ಲಿ ಓಡಾಡುವ ಭಾರದ ವಾಹನಗಳಿಂದ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಇನ್ನು ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರಿರುವುದರಿಂದ ರಸ್ತೆ ಕಾಮಗಾರಿ ನಡೆದಿದ್ದು, ವಾಹನ ಸಂಚಾರ ಕಠಿಣವಾಗಿದೆ.
ಇಂತಹ ಇಕ್ಕಟ್ಟಿನ ರಸ್ತೆಯಲ್ಲಿ ಭಾರದ ವಾಹನಗಳ ಸಂಚಾರವನ್ನ ನಿಲ್ಲಿಸಿ ಮಾರ್ಗ ಬದಲಿಸುವಂತೆ ಸಾರ್ವಜನಿಕರು ಎಷ್ಟೇ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಪೊಲೀಸರು ವಸೂಲಿ ದಂಧೆಗೆ ಇಳಿದಿದ್ದಾರೆ. ಪೊಲೀಸ್ ಠಾಣೆಯ ಮುಂದೆಯೇ ಲಾರಿಗಳನ್ನ ನಿಲ್ಲಿಸಿ ಮನಬಂದಂತೆ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.
ಅಪ್ಪಿ ತಪ್ಪಿ ಯಾವುದಾದರೂ ಲಾರಿ ಚಾಲಕ ಹಣ ನೀಡದೆ ತಪ್ಪಿಸಿಕೊಂಡು ಹೋದರೆ ಮುಂದಿನ ವೃತ್ತದಲ್ಲಿ ಇನ್ನಿಷ್ಟು ಪೊಲೀಸರು ಎದುರಾಗಿ ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಹೆದರಿರುವ ಲಾರಿಗಳ ಚಾಲಕರು ಸ್ವಯಂ ಪೊಲೀಸರ ಬಳಿಬಂದು 200 ರಿಂದ 300 ರೂ. ಹಣ ಕೊಟ್ಟು ಹೋಗುತ್ತಿದ್ದಾರೆ. ಇದು ರಾಯಚೂರು ಪೊಲೀಸರ ಹಣೆಬರಹವಾಗಿದೆ.