ರಾಮನಗರ: ನಗರದ ಟೌನ್ ಪೊಲೀಸರು ತಡರಾತ್ರಿ ಮಾನಸಿಕ ಅಸ್ವಸ್ಥ ಹಾಗೂ ವಿಕಲಚೇತನ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪೊಲೀಸರಿಂದ ಹಲ್ಲೆಗೊಳಗಾದ ಯುವಕನನ್ನು ಸೈಯದ್ ತೌಸಿಫ್(18) ಎಂದು ಗುರುತಿಸಲಾಗಿದೆ. ಸೈಯದ್ ತೌಸಿಫ್ ರಾಮನಗರದ ಯಾರಬ್ ನಗರದ ನಿವಾಸಿಯಾಗಿದ್ದಾನೆ. ತಂದೆಯ ಜೊತೆ ಗ್ಯಾರೇಜ್‍ನಲ್ಲಿ ಕೆಲಸ ಮಾಡಿ ಮನೆಗೆ ತೆರಳುತ್ತಿದ್ದ ತೌಸಿಫ್ ಕಳೆದ ಭಾನುವಾರ ರಾತ್ರಿ ನಗರಸಭೆ ಮುಂಭಾಗದಲ್ಲಿನ ಬಾಲಕಿಯರ ಹಾಸ್ಟೆಲ್ ಸಮೀಪದಲ್ಲಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾನೆ. ಈ ವೇಳೆ ಗಸ್ತಿನಲ್ಲಿದ್ದ ಮೂವರು ಪೊಲೀಸ್ ಪೇದೆಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ತೌಸಿಫ್‍ನ ಪೋಷಕರು ಆರೋಪಿಸಿದ್ದಾರೆ.
ತೌಸಿಫ್‍ನ ಪೃಷ್ಠದ ಭಾಗ ಹಾಗೂ ಎರಡು ಕಾಲುಗಳು ಲಾಠಿಯಿಂದ ಹೊಡೆದಿರುವುದರಿಂದ ನೀಲಿಗಟ್ಟಿದ್ದು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಸಂಬಂಧ ಪೊಲೀಸರು ತಾವು ಹಲ್ಲೆ ನಡೆಸಿಲ್ಲ, ಆತ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದು ಈ ವೇಳೆ ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಯುವಕನ ಕುಟುಂಬಸ್ಥರು ಪೊಲೀಸರ ನಡವಳಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಬಗ್ಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.