ಚಿಕ್ಕಬಳ್ಳಾಪುರ: ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿದ್ದ ಸವಾರನಿಗೆ ದಂಡ ಕಟ್ಟುವಂತೆ ಹೇಳಿದಾಗ, ನಿರಾಕರಿಸಿ ವಾಗ್ವಾದ ಮಾಡಿದ್ದಕ್ಕೆ ಆತನ ಮೇಲೆ ಪೊಲೀಸರು ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಹೊರವಲಯದ ಬಾಗೇಪಲ್ಲಿ ರಸ್ತೆಯಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಹೆಲ್ಮೆಟ್ ಹಾಕಿಲ್ಲ ಅಂತ ಪೊಲೀಸರು ದಂಡ ಕಟ್ಟುವಂತೆ ಹೇಳಿದ್ದರೂ ದಂಡ ಕಟ್ಟದೆ ಉದ್ದಟತನ ಪ್ರದರ್ಶಿಸಿದ್ದ ಸವಾರನ ವಿಡಿಯೋ ಸಖತ್ ವೈರಲ್ ಅಗಿತ್ತು. ಹೀಗೆ ಅದೇ ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಸವಾರನ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಜಿಲ್ಲೆಯ ಚಿಂತಾಮಣಿ ನಗರ ಹೊರವಲಯದ ಬಾಗೇಪಲ್ಲಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಬೈಕ್ ಸವಾರನ ಜೊತೆ ಪೊಲೀಸರು ಅನುಚಿತವಾಗಿ ವರ್ತನೆ ನಡೆಸಿದ್ದಾರೆ. ಟಿವಿಎಸ್ ಎಕ್ಸ್ ಎಲ್ ಬೈಕ್ ಸವಾರ ಹೆಲ್ಮೆಟ್ ಹಾಕಿಲ್ಲ ಅಂತ ಪೊಲೀಸರು ದಂಡ ವಿಧಿಸಿದ್ದಾರೆ. ಅದ್ರೆ ಆಗ ದಂಡ ಕಟ್ಟಲು ಹಿಂದೇಟು ಹಾಕಿದ ಬೈಕ್ ಸವಾರ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ರೋಸಿ ಹೋದ ಪೊಲೀಸ್ ಪೇದೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರೊಬ್ಬರು ಈ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಬೈಕ್ ಸವಾರನ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪೊಲೀಸರ ಈ ರೀತಿಯ ದೌರ್ಜನ್ಯ ಎಷ್ಟು ಸರಿ? ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲೆಯ ಹಲವೆಡೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಎಸ್‍ಪಿ ಸಂತೋಷ್ ಬಾಬುರವರು ಪೊಲೀಸರಿಗೆ ಸಾರ್ವಜನಿಕರೊಂದಿಗೆ ಸಂಯಮದೊಂದಿಗೆ ವರ್ತಿಸಲು ಸೂಚನೆ ಕೊಟ್ಟರೆ ಒಳಿತು ಅಂತ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.