ಶಿವಮೊಗ್ಗ: ಗಾಂಜಾ ಬೆಳೆದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದ ರೈತನ ಮೇಲೆ ಪೊಲೀಸರು ಕ್ರೌರ್ಯ ತೋರಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆಯಲ್ಲಿ ನಡೆದಿದೆ.
ಕುಂಸಿ ಪೊಲೀಸ್ ಠಾಣೆಯ ಅಧಿಕಾರಿ ಜಗದೀಶ್, ಪೇದೆಗಳಾದ ಪರಮೇಶ್ವರ್ ನಾಯ್ಕ್ ಹಾಗೂ ಪ್ರಶಾಂತ್ ಎಂಬವರು ಈ ಹಲ್ಲೆ ನಡೆಸಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕುಂಸಿ ಸಮೀಪದ ನಾರಾಯಣಪುರದ ಕೃಷ್ಣ ನಾಯ್ಕ್ ಎಂಬ ರೈತನನ್ನು ಗಾಂಜಾ ಬೆಳೆದ ಆರೋಪದಲ್ಲಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ 5,000 ರೂ. ಕೊಟ್ಟರೆ ಕೇಸ್ ದಾಖಲಿಸದೆ ಬಿಡುಗಡೆ ಮಾಡುತ್ತೇವೆ ಎಂದಿದ್ದರಂತೆ. ಆದರೆ ಕೃಷ್ಣ ಹಣ ಕೊಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪೊಲೀಸರು ಅಮನವೀಯವಾಗಿ ಥಳಿಸಿದ್ದಾರೆ.
ಪೊಲೀಸರ ಥಳಿತದಿಂದ ಕೂರಲೂ ಆಗದೆ, ಮಲಗಲೂ ಆಗದೇ ಕೃಷ್ಣ ನರಕಯಾತನೆ ಅನುಭವಿಸುತ್ತಿದ್ದಾರೆ. ಕೃಷ್ಣ ನಾಯ್ಕ ರನ್ನು ಎನ್‍ಡಿಪಿಎಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಪೊಲೀಸರು ಥಳಿಸಿರುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶರು ಕೃಷ್ಣ ನಾಯ್ಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಿಸಲು ಆದೇಶ ಮಾಡಿದ್ದಾರೆ. ಗಾಂಜಾ ಬೆಳೆದಿದ್ದರೆ ಬಂಧಿಸಿ ಕಾನೂನು ಕ್ರಮಕೈಗೊಳ್ಳಲಿ. ಆದರೆ ಅಮಾನವೀಯವಾಗಿ ಥಳಿಸುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು ಎಂದು ಅವರ ಸಂಬಂಧಿಗಳು ಪ್ರಶ್ನಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv