ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ನಾನಾ ಕಡೆ ನಡೆಸುತ್ತಿರುವ ಸಾಧನಾ ಸಮಾವೇಶದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ಹೋಗಿದೆ.
ಪ್ರತಿಭಟನೆ ನಡೆದರೂ ಯಾವುದೇ ಮಾಧ್ಯಮಗಳಲ್ಲಿ ಅದು ಬರದಂತೆ ನೋಡಿಕೊಳ್ಳುವ ಹೊಣೆಯನ್ನೂ ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಈ ವಿಷಯ ಶಿವಮೊಗ್ಗದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರು.
ಅಷ್ಟೇ ಅಲ್ಲ ಶಿವಮೊಗ್ಗದಲ್ಲಿ ಕರ್ತವ್ಯ ನಿರತರಾಗಿದ್ದ ದಾವಣಗೆರೆ ಎಸ್ ಪಿ ಭೀಮಾಶಂಕರ ಗುಳೇದ ಅವರು ಬಿಜೆಪಿ ಕಾರ್ಯಕರ್ತರನ್ನು ಕಾಲಿನಿಂದಲೂ ಒದ್ದರು. ಇದನ್ನು ಚಿತ್ರೀಕರಣ ಮಾಡಿದ ಚಾನಲ್ ನ ಕ್ಯಾಮರಾಮನ್ ಗೆ ಧಮ್ಕಿ ಹಾಕಿ, ಕ್ಯಾಮರಾ ಕಿತ್ತುಕೊಂಡು ತಮ್ಮ ಕಾರಿನಲ್ಲಿ ಹಾಕಿಕೊಂಡರು. ಈ ಬಗ್ಗೆ ಇನ್ನೊಬ್ಬ ಹಿರಿಯ ಪತ್ರಿಕಾ ಛಾಯಾಗ್ರಾಹಕರು ತೀವ್ರವಾಗಿ ಖಂಡಿಸಿದಾಗ ಕ್ಯಾಮರಾ ಹಿಂತಿರುಗಿಸಿದರು.
ಬೆನ್ನು ಹತ್ತಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಈ ವಿಡಿಯೋ ಡಿಲೀಟ್ ಮಾಡುವಂತೆ ಒತ್ತಾಯ ಹೇರಿದರು. ಕಾಲಿನಿಂದ ಒದ್ದಿದ್ದನ್ನು ಚಿತ್ರೀಕರಣ ಮಾಡಿದ್ದಕ್ಕೆ ಗರಂ ಆಗಿ ಈ ಕೃತ್ಯವೆಸಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿವಮೊಗ್ಗದ ಮಾಧ್ಯಮ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಇದಕ್ಕೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿವೆ. ಪ್ರತಿಭಟನೆ ಸುದ್ದಿ ಮಾಡದಂತೆ ಪೊಲೀಸರ ಮೇಲೆ ಒತ್ತಡ ಹೇರಿರುವುದೇ ಈ ಅಧಿಕಾರಿ ಇಷ್ಟು ವೀರಾವೇಷ ತೋರಲು ಕಾರಣ ಎಂದು ಇಲಾಖೆ ಮೂಲಗಳು ತಿಳಿಸಿವೆ.