-ಮಾಲೀಕರಿಗೆ ಹಿಂದಿರುಗಿಸಿದ ಪೊಲೀಸರು
ಬೆಂಗಳೂರು: ಐಶಾರಾಮಿ ಜೀವನಕ್ಕಾಗಿ ಮನೆ ಬೀಗ ಮುರಿಯುತ್ತಿದ್ದ ಖತರ್ನಾಕ್ ಗ್ಯಾಂಗ್‍ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಪಿ, ರಾಜ ಅಲಿಯಾಸ್ ಜಪಾನ್ ರಾಜ ಮತ್ತು ಡೇವಿಡ್ ಬಂಧಿತ ಆರೋಪಿಗಳು. ಕೆ.ಪಿ ಅಗ್ರಹಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹಾಡಹಗಲಲ್ಲೇ ಕಬ್ಬಿಣದ ರಾಡ್‍ನಿಂದ ಮನೆಯ ಬೀಗ ಮುರಿಯುತ್ತಿದ್ದರು. ಬಳಿಕ ಮನೆಗೆ ನುಗ್ಗಿ ಹಣ, ಚಿನ್ನ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು.
ಪೊಲೀಸರು ಬಂಧಿತರಿಂದ ಬರೋಬ್ಬರಿ 35 ಲಕ್ಷ ಬೆಲೆ ಬಾಳುವ 1.119 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಜಪಾನ್ ರಾಜನನ್ನು ಅರೆಸ್ಟ್ ಮಾಡಿ 1 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಫೆಬ್ರವರಿಯಲ್ಲಿ ಜೈಲಿನಿಂದ ರಿಲೀಸ್ ಆಗಿ ಮತ್ತೆ ಜಪಾನ್ ರಾಜ 18 ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ್ದನು.
ಜಪಾನ್ ರಾಜ ಕದ್ದ ಚಿನ್ನವನ್ನು ಹೆಂಡತಿಯರ ಮೂಲಕ ವಿಲೇವಾರಿ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ಜಪಾನ್ ರಾಜನಿಗೆ ಇಬ್ಬರು ಹೆಂಡತಿಯರಿದ್ದು, ಇವರ ಮೂಲಕ ಚಿನ್ನ ವಿಲೇವಾರಿ ಮಾಡುತ್ತಿದ್ದನು. ಸದ್ಯಕ್ಕೆ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.