ಹೆತ್ತವರನ್ನು ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಟೋರಿಯಸ್ ಸೈಕೋಪಾತ್ ಅರೆಸ್ಟ್!

Public TV
2 Min Read
SPYCO ARREST

ಬೆಂಗಳೂರು: ಹೆತ್ತವರನ್ನ ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಗರದ ನಟೋರಿಯಸ್ ಸೈಕೋಪಾತ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಆದಿತ್ಯ ಶರತ್(25) ಬಂಧಿತ ಆರೋಪಿ. ಈತ ಬೈಕ್ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರಿಗೆ ಸೆರೆಸಿಕ್ಕಿದ್ದು, ಬಸವೇಶ್ವರನಗರ ಪೊಲೀಸರು ಶರತ್‍ನನ್ನು ಬಂಧಿಸಿದ್ದಾರೆ.

ಯಾರು ಈ ಶರತ್?
ಕಾಮಾಕ್ಷಿಪಾಳ್ಯ ಬಳಿಯ ವೃಷಭಾವತಿನಗರ ನಿವಾಸಿ ಆರೋಪಿ ಶರತ್ ಡಿಪ್ಲೋಮಾ ಪದವಿ ಓದಿದ್ದು ಹಲವು ಹುಡುಗಿಯರನ್ನ ತನ್ನ ಗರ್ಲ್ ಫ್ರೆಂಡ್ಸ್ ಅಂತ ಮನೆಯಲ್ಲಿ ಹೇಳುತ್ತಿದ್ದನು. ಅಷ್ಟೇ ಅಲ್ಲದೇ ಶರತ್ ಆಗಾಗ ಗೆಳತಿಯರನ್ನ ಬದಲಿಸುತ್ತಿದ್ದನು. ಮಗನ ವರ್ತನೆಗೆ ಬೇಸತ್ತು ಪೋಷಕರು ಬುದ್ಧಿವಾದ ಹೇಳಿ ಮದುವೆಯಾಗು ಎಂದು ಒತ್ತಡ ಹಾಕಲು ಶುರು ಮಾಡಿದ್ದರು.

ARREST

ಪೋಷಕರ ಒತ್ತಡ ತಾಳಲಾರದೇ ಅವರನ್ನೇ ಕೊಲ್ಲಲು ಶರತ್ ನಿರ್ಧರಿಸಿದ್ದ. ಬಳಿಕ ಅವರಿಗೆ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ್ದನು. ಆದರೆ ಈ ಬಗ್ಗೆ ಪೋಷಕರು ತಿಳಿದುಕೊಂಡು ಆತನನ್ನು ಮನೆಯಿಂದಲೇ ಹೊರಹಾಕಿದ್ದಾರೆ. ಅಲ್ಲದೇ ಮಗನ ವಿರುದ್ಧವೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

ಖಿನ್ನತೆಗೆ ಜಾರಿದ: ಮನೆಯಿಂದ ಹೊರಬಿದ್ದ ನಂತರ ಶರತ್ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದನು. ಪೋಷಕರು ಹೊರಹಾಕಿದ ಕೋಪಕ್ಕೆ ಖಿನ್ನತೆಗೆ ಒಳಗಾಗಿದ್ದ ಆತ ಅವರನ್ನು ಕೊಲ್ಲಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದ. ಅಷ್ಟೇ ಅಲ್ಲದೇ ಕೊಲೆ ಮಾಡುವುವುದು ಹೇಗೆ ಎಂದು ಗೂಗಲ್ ನಲ್ಲಿ ಸರ್ಚ್ ಕೂಡ ಮಾಡಿದ್ದನು. ಸರ್ಚ್ ಮಾಡಿದ ಬಳಿಕ ಮನೆಯ ವಾಟರ್ ಟ್ಯಾಂಕ್ ಗೆ ವಿಷ ಬೆರೆಸಿದ್ದ. ಈ ವಿಷಯ ಕೂಡ ಪೋಷಕರಿಗೆ ತಿಳಿಯುತ್ತದೆ.

ಪಿಸ್ತೂಲ್ ಖರೀದಿ: ವಿಷದ ಮೂಲಕ ಕೊಲೆ ಮಾಡುವುದು ಸಾಧ್ಯವಾಗದೇ ಇದ್ದಾಗ ಕೊನೆಗೆ ಗುಂಡಿಟ್ಟು ಕೊಲ್ಲುವುದೇ ಸೂಕ್ತ ಎಂದು ನಿರ್ಧರಿಸಿ ಬಿಹಾರ ಮೂಲದ ತನ್ನ ಡಿಪ್ಲೋಮಾ ಸ್ನೇಹಿತನ ಮೂಲಕ ಪಿಸ್ತೂಲ್ ಖರೀದಿಸುತ್ತಾನೆ. ಆದರೆ ಬೈಕ್ ಕಳ್ಳತನ ಮಾಡುವಾಗ ಆರೋಪಿ ಶರತ್ ಸಿಕ್ಕಿಬಿದ್ದಿದ್ದಾನೆ. ಬಂಧನದ ವೇಳೆ ಒಂದು ಪಿಸ್ತೂಲ್ 8 ಜೀವಂತ ಗುಂಡುಗಳು ಪತ್ತೆಯಾಗಿತ್ತು. ಪಿಸ್ತೂಲ್ ಖರೀದಿಸಿದ್ದು ಯಾಕೆ ಎಂದು ವಿಚಾರಣೆ ವೇಳೆ ಪೊಲೀಸರು ಪ್ರಶ್ನಿಸಿದಾಗ ತಂದೆ-ತಾಯಿಯನ್ನ ಕೊಲ್ಲಲ್ಲಿಕ್ಕಾಗಿ ಖರೀದಿಸಿದ್ದಾಗಿ ಹೇಳಿಕೆ ನೀಡಿ ತನ್ನ ಎಲ್ಲ ವೃತ್ತಾಂತವನ್ನು ತಿಳಿಸಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

ಸದ್ಯಕ್ಕೆ ಪೋಲೀಸರು ಸೈಕೋಪಾಥ್ ಶರತ್ ವಿರುದ್ಧ ಕೊಲೆಯತ್ನ, ಕಳ್ಳತನ, ಮೋಟಾರ್ ವಾಹನ ಕಾಯ್ದೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣದ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *