-ರೈತ ಸಂಘದ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿ
ಮೈಸೂರು: ಕೇಸಿನ ವಿಚಾರಣೆ ಸಂಬಂಧ ಪೊಲೀಸ್ ಠಾಣೆಗೆ ಹೋದ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ಮಹಿಳಾ ಪೊಲೀಸ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಧಿಸಲಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬೆಟ್ಟದಪುರ ಠಾಣೆಯಲ್ಲಿ ಈ ಘಟನೆ ನಡೆದಿದೆ. ಲೋಕೇಶ್ ರಾಜೇ ಅರಸ್ ಬಂಧನ ಖಂಡಿಸಿ ರೈತ ಸಂಘ ಕಾರ್ಯಕರ್ತರು ಅಹೋರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಠಾಣೆ ಮುಂದೆ ಧರಣಿ ನಡೆಸಿದ್ದಾರೆ.
ಕೇಸಿನ ವಿಚಾರಣೆ ಬಗ್ಗೆ ಠಾಣೆಗೆ ಹೋದಾಗ ಮಹಿಳಾ ಪೇದೆ ಹಾಗೂ ಲೋಕೇಶ್ ರಾಜೇ ಅರಸ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಲೋಕೇಶ್ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡರು ಎಂದು ಮಹಿಳಾ ಪೇದೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಲೋಕೇಶ್ ರಾಜೇ ಅರಸ್‍ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪೊಲೀಸರ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿ ಹಲವರು ಭಾಗಿಯಾಗಿದ್ದರು. ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಸ್ನೇಹಾ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.