ಶಿವಮೊಗ್ಗ: ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕಾಂಗ್ರೆಸ್ ಮುಖಂಡನ ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ಕಲೀಂವುಲ್ಲಾ ಬಂಧಿತ ಆರೋಪಿ. ಈತ ಕಾಂಗ್ರೆಸ್ ಸೇರುವ ಮುನ್ನ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದನು. ಉದ್ಯಮಿ ಹಬೀಬ್ ಎಂಬವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಲೀಂ ತೊಡಗಿದ್ದನು. ಈ ವ್ಯವಹಾರದ ಹಣಕಾಸಿನ ವಿಷಯದಲ್ಲಿ ಕಲೀಂ ಹಾಗೂ ಹಬೀಬ್ ಇಬ್ಬರ ನಡುವೆ ವಿವಾದ ತಲೆದೋರಿತ್ತು.
ಇದೇ ಕಾರಣದಿಂದ ಹಬೀಬ್ ಅವರನ್ನು ಮುಗಿಸಲು ಕಲೀಂವುಲ್ಲಾ ರೌಡಿಶೀಟರ್ ಸಾತು ಎಂಬಾತನಿಗೆ ಸುಪಾರಿ ನೀಡಿದ್ದ. ಸುಪಾರಿ ಪಡೆದ ಸಾತು, ಹಬೀಬ್ ಸಾಗುವ ಮಾರ್ಗದಲ್ಲಿ ಅವರ ಕಾರಿನಲ್ಲೇ ಮುಗಿಸಲು ವಿಫಲ ಯತ್ನ ನಡೆಸಿದ್ದ. ಈ ಬಗ್ಗೆ ಹಬೀಬ್ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಾತುನನ್ನು ಬಂಧಿಸಿದಾಗ ಕಲೀಂ ಸುಪಾರಿ ಕೊಟ್ಟದ್ದಲ್ಲದೆ ರಿವಾಲ್ವರ್ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಸುಪಾರಿ ಕೊಲೆ ಮಾಡಲು ನೀಡಿದ್ದ ಹಣ ಹಾಗೂ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.