ಮಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಸುಮಾರು 15 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಕಾಟಿಪಳ್ಳ ಕೃಷ್ಣಾಪುರದ ಕೇಶವ ಸನಿಲ್ ಬಂಧಿತ ಆರೋಪಿ. ಈತ ಮಂಗಳೂರು ನಗರಕ್ಕೆ ಕೇರಳದಿಂದ ಅಕ್ರಮವಾಗಿ ಗಾಂಜಾವನ್ನು ಕಾರಿನಲ್ಲಿ ತಂದು ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸಿದ್ದನು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಬಳಿ ಆರೋಪಿಯನ್ನ ಬಂಧಿಸಿದ್ದಾರೆ.
Advertisement
ಗಾಂಜಾವನ್ನು ಆರೋಪಿಯು ಕೇರಳ ಮೂಲದ ವ್ಯಕ್ತಿಯೊಬ್ಬನಿಂದ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ತಂದಿದ್ದನು. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ 1.830 ಕೆಜಿ ಗಾಂಜಾ, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿ ಹಾಗೂ ವಶಪಡಿಸಿಕೊಂಡ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
Advertisement
ಆರೋಪಿ ಕೇಶವ ಸನಿಲ್ ವಿರುದ್ಧ ಈ ಹಿಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧ ಪಟ್ಟಂತೆ ಒಟ್ಟು 12 ಪ್ರಕರಣ ಸೇರಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಅಲ್ಲದೇ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ಹೀಗೆ ಒಟ್ಟು 15 ಪ್ರಕರಣ ದಾಖಲಾಗಿತ್ತು.
Advertisement