ರಾಮನಗರ: ವಿದ್ಯಾಭ್ಯಾಸಕ್ಕೆಂದು ಬಂದು ಐಷಾರಾಮಿ ಜೀವನ ಹಾಗೂ ಮೋಜು-ಮಸ್ತಿಗಾಗಿ ಅಡ್ಡದಾರಿ ಹಿಡಿದು ಜೈಲು ಸೇರಿದ್ದರು. ಆ ಆರೋಪಿಗಳಿಗೆ ಜಾಮೀನು ಕೊಡಿಸಲು ಹಾಗೂ ತಾವೂ ಐಷಾರಾಮಿ ಜೀವನ ನಡೆಸಲು ಗ್ರಾಹಕರ ಎಟಿಎಂ ಮಾಹಿತಿ ಕದ್ದು ಹಣ ಡ್ರಾ ಮಾಡುತ್ತಿದ್ದ ಇಬ್ಬರು ನೈಜಿರಿಯಾ ದೇಶದ ಹಾಗೂ ಓರ್ವ ಪುಣೆ ಮೂಲದ ವ್ಯಕ್ತಿಯನ್ನು ಬಂಧಿಸುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನೈಜೀರಿಯಾ ಮೂಲದ ಅಲೂಕ ಸಾಂಡ್ರಾ ಒರೆಯಾ (25), ಹೆನ್ರಿ ಅಕ್ಯುಟಿಮೆನ್ (25) ಹಾಗೂ ಮಹಾರಾಷ್ಟ್ರದ ಪುಣೆ ಮೂಲದ ವಿಜಯ್ ಥಾಮಸ್ ಬಿಂಗರ್ ಡೈವ್ ಬಂಧಿತರು.
ಜನನಿಬಿಡ ಎಟಿಎಂ ಸೆಂಟರ್‌ಗಳಲ್ಲಿ ಸ್ಕಿಮ್ಮಿಂಗ್ ಮಿಷಿನ್ ಅಳವಡಿಸಿ ಗ್ರಾಹಕರ ಎಟಿಎಂ ಮಾಹಿತಿ ಕದಿಯುತ್ತಿದ್ದರು. ಬಳಿಕ ನಕಲಿ ಎಟಿಎಂಗೆ ಮಾಹಿತಿಯನ್ನ ತುಂಬಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಈ ರೀತಿ ರಾಮನಗರದಲ್ಲಿ 44 ಪ್ರಕರಣಗಳು ನಡೆದಿದ್ರೆ, ಬೆಂಗಳೂರು ಸೈಬರ್ ಠಾಣೆಯಲ್ಲಿ 6 ಹಾಗೂ ಚಿತ್ರದುರ್ಗ ಸೈಬರ್ ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳ ಇದೀಗ ಬಂಧಿತರಿಂದ ಪತ್ತೆಯಾಗಿವೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಐಷಾರಾಮಿ ಜೀವನ ನಡೆಸಲು ಸ್ಕಿಮ್ಮಿಂಗ್ ಮಿಷಿನ್ ಮೂಲಕ ಎಟಿಎಂ ಮಾಹಿತಿ ಕದ್ದು, ಹಣ ಡ್ರಾ ಮಾಡಿ ನೈಜೀರಿಯಾ ದೇಶದ ಎರ್ಹಮಾನ್ ಸ್ಮಾರ್ಟ್ ಅಲಿಯಾಸ್ ಗೋಡ್ಸನ್, ಉಡೋ ಕ್ರಿಸ್ಟಿಯನ್, ತಾಂಜೇನಿಯಾ ದೇಶದ ಮಥಿಯಾಸ್ ಅಲಿಯಾಸ್ ಕಾಕಾ ಎಂಬ ವಿದ್ಯಾರ್ಥಿಗಳು ಜೈಲು ಸೇರಿದ್ದರು. ಈ ಆರೋಪಿಗಳನ್ನ ಜಾಮೀನಿನ ಮೇಲೆ ಬಿಡಿಸುವುದಕ್ಕೋಸ್ಕರ ಇದೀಗ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಅದೇ ಕೃತ್ಯಕ್ಕೆ ಇಳಿದಿದ್ದರು.
ಅಲ್ಲದೇ ಹಲವಾರು ಕಡೆಗಳಲ್ಲಿ ಸ್ಕಿಮ್ಮಿಂಗ್ ಮಿಷಿನ್ ಫಿಕ್ಸ್ ಮಾಡಿ ಮಾಹಿತಿ ಕದ್ದು ಹಣ ಡ್ರಾ ಮಾಡಿದ್ದರು. ಇದೀಗ ರಾಮನಗರ ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳು ಈ ಹಿಂದೆಯೇ ತಮ್ಮ ಜೊತೆಗಿದ್ದ ಆರೋಪಿಗಳಿಂದಲೇ ಸ್ಕಿಮ್ಮಿಂಗ್ ಮಿಷಿನ್ ಮೂಲಕ ಹಣ ಡ್ರಾ ಮಾಡುವ ಟ್ರೈನಿಂಗ್ ಕೂಡ ಪಡೆದಿದ್ದರು.
ಬಂಧಿತರಿಂದ ನಗದು, ಲ್ಯಾಪ್‍ಟಾಪ್, ಮೊಬೈಲ್, ಅಲ್ಲದೇ ನಾಲ್ಕು ಪಾಸ್‍ಪೋರ್ಟ್ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಸ್ಕಿಮ್ಮಿಂಗ್ ಮಿಷಿನ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.