ಚಿತ್ರದುರ್ಗಾ: ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣದ ತನಿಖೆ ಆರು ದಿನಗಳ ನಂತರ ಚುರುಕು ಪಡೆದಿದೆ. ಇದೀಗ ಮಠದಲ್ಲೇ ಶ್ರೀಗಳ ಬಂಧನವಾಗಿದೆ.
ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿರುವ ಹೊತ್ತಲ್ಲೇ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿರುವ ಎ2 ಹಾಸ್ಟೆಲ್ ವಾರ್ಡನ್ ರಶ್ಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಾರ್ಡನ್ ರಶ್ಮಿ ಮೇಲೆ ಪೊಲೀಸರು ಕೈಗೊಳ್ಳುವ ಕ್ರಮದ ಮೇಲೆ ಶ್ರೀಗಳ ಮೇಲೆ ಯಾವ ರೀತಿಯ ಕ್ರಮ ಆಗಬಹುದು ಎಂಬುದು ನಿರ್ಧಾರವಾಗುವ ಸಂಭವ ಇತ್ತು. ಆ ಬಳಿಕ ರಶ್ಮಿಯವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸ್ವಾಮೀಜಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಶ್ರೀಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಮಠದಿಂದ ಹೊರಬರುತ್ತಿದ್ದಂತೆ ಶ್ರೀಗಳು ಕಾವಿ ಕಳಚಿ ಬಿಳಿ ವಸ್ತ್ರದಲ್ಲಿ ಹೊರಬಂದಿದ್ದಾರೆ.
ಶ್ರೀಗಳಿಗೆ ಈ ಹಿಂದೆ ಕೊರೊನಾ ಬಂದಿತ್ತು. ವೈದ್ಯಕೀಯ ಪರೀಕ್ಷೆಗೆ ಬಂದಿದ್ದೆ. ಬಿಪಿ ಸಮಸ್ಯೆ ಇತ್ತು ಪರೀಕ್ಷೆ ನಡೆಸಿ ಬಳಿಕ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆ ನಡೆಸಿದ ಡಾಕ್ಟರ್ ಪಾಲಕ್ಷಯ್ಯ ತಿಳಿಸಿದ್ದಾರೆ.
ಮಠದ ವಾರ್ಡನ್ ರಶ್ಮಿ ದಾಖಲಿಸಿದ್ದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಮಠದ ಆಡಳಿತಾಧಿಕಾರಿ ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್‍ಗೆ ಜಾಮೀನು ಸಿಕ್ಕಿದೆ. ಇದೇ ಹೊತ್ತಲ್ಲಿ ಮಠದ ಆಡಳಿತ ವಿಭಾಗದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಮತ್ತೆ ಎಸ್‍ಕೆ ಬಸವರಾಜನ್‍ರನ್ನು ಕೈಬಿಡಲಾಗಿದೆ. ಮಠದ ಆಡಳಿತಾಧಿಕಾರಿಯಾಗಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಸ್ತ್ರದ್‍ಮಠ ಅವರನ್ನು ನೇಮಿಸಲು ಇಂದು ನಡೆದ ಸಭೆಯಲ್ಲಿ ಶ್ರೀಗಳು ನಿರ್ಣಯ ತೆಗೆದುಕೊಂಡಿದ್ದಾರೆ. ಅಲ್ಲದೇ, ಶ್ರೀಗಳ ಆಪ್ತ ಕಾರ್ಯದರ್ಶಿಯನ್ನಾಗಿ ಅನಿತ್ ಕುಮಾರ್ ಎಂಬುವರನ್ನು ನೇಮಕ ಮಾಡಿ ಸಭೆ ನಿರ್ಧಾರ ತೆಗೆದುಕೊಂಡಿದೆ. ಜಾಮೀನು ಬಳಿಕ ಮಾತನಾಡಿದ ಎಸ್‍ಕೆ ಬಸವರಾಜನ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ವಿರುದ್ಧವೇ ಷಡ್ಯಂತ್ರ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತ ಮಕ್ಕಳ ರಕ್ಷಣೆಗೆ ನಾವು ನಿಂತಿದ್ದೇವೆ ಎಂಬ ಮಾತನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸೌಭಾಗ್ಯ ಬಸವರಾಜನ್ ಸಹ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದು, ಮಠದಿಂದ ಇಬ್ಬರು ಮಕ್ಕಳನ್ನು ಬಲವಂತವಾಗಿ ಹೊರಗೆ ಹಾಕಲಾಗಿದ್ದು, ಅವರ ರಕ್ಷಣೆಗೆ ನಿಂತಿದ್ದು ತಪ್ಪಾ ಎಂದು ಪ್ರಶ್ನಿಸಿದ್ದರು.