ಹಾವೇರಿ: ಜಿಲ್ಲೆಯ ಬಂಕಾಪುರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದರೋಡೆ ಮಾಡಲು ಹೊಂಚು ಹಾಕಿದ್ದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಮ್ಮದ್ ಸಾಧಿಕ್ ಸೋನಾರ (20), ಮಹಮ್ಮದ್ ಮಲ್ಲಿಗಾರ (27), ಮೆಹಬೂಬಸಾಬ ಹಿತ್ತಲಮನಿ (23), ಮಲ್ಲಿಕ್ ರೆಹಾನ್ ಮಂಚಗಿ (20) ಮತ್ತು ಮೆಹಬೂಬ ಅಲಿ ಸಾವಿಕೇರಿ (22) ಬಂಧಿತ ಆರೋಪಿಗಳು. ಎಲ್ಲರು ಹಾನಗಲ್ ತಾಲೂಕಿನ ಅಕ್ಕಿ ಆಲೂರು ನಿವಾಸಿಗಳು ಎಂದು ಗುರುತಿಸಲಾಗಿದೆ.
ದರೋಡೆ ನಡೆಸಲು ಸಂಚು ರೂಪಿಸಿದವರಿಂದ ಎರಡು ಕಾರ್, ಮಚ್ಚು, ಲಾಂಗ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳ ವಿರುದ್ಧ ಕಾರ್ಯಾರಚಣೆ ನಡೆಸಲಾಗಿತ್ತು ಎಂಬ ಮಾಹಿತಿ ಲಭಿಸಿದ್ದು, ಆರೋಪಿಗಳು ದರೋಡೆ ಮಾಡಿದ್ದ ಹಣವನ್ನ ಮೋಜು ಮಸ್ತಿ ಮಾಡಲು ಬಳಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನ ತಡೆದು ದರೋಡೆ ಮಾಡಲು ಹೊಂಚು ಹಾಕಿದ್ದರು. ಬಂಕಾಪುರ ಠಾಣೆಯ ಪಿಎಸ್‍ಐ ಸಂತೋಷ ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews