ದಾವಣಗೆರೆ: ನಕಲಿ ಛಾಪಾಕಾಗದ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಅರೋಪಿಗಳನ್ನು ಬಂಧಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಮಧ್ಯ ಕರ್ನಾಟಕ ಕೋಳಿ ಸಾಕಣೆದಾರರ ಸಹಕಾರ ಸಂಘದಲ್ಲಿ ಸಾವಿರಾರು ನಕಲಿ ಇ-ಸ್ಟ್ಯಾಂಪ್ ಪೇಪರ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ದೇವರಾಜ್ ಮಲ್ಲಾಪುರ ಎಂಬವರಿಗೆ ಸೇರಿದ ಇ-ಸ್ಟ್ಯಾಂಪ್ ಪೇಪರ್ ವಿತರಣಾ ಕೇಂದ್ರದಲ್ಲಿ ಅಕ್ರಮವಾಗಿ ನಕಲಿ ಛಾಪಾಕಾಗದಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲದೇ ನಿತ್ಯ 30 ರಿಂದ 50 ನಕಲಿ ಇ- ಸ್ಟ್ಯಾಂಪ್ ಸೃಷ್ಟಿಸಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದರು.
ಸಹಕಾರ ಸಂಘದಲ್ಲಿ ನಕಲಿ ಛಾಪಾಕಾಗದ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಎಸ್‍ಪಿ ಗಮನಕ್ಕೆ ತಂದಿದ್ರು. ಇದರಿಂದ ಎಸ್‍ಪಿ ಭೀಮಾಶಂಕರ ಗುಳೇದ್ ರವರ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಸಿಬ್ಬಂದಿ ಸ್ವಯಂಪ್ರೇರಿತ ದಾಳಿ ನಡೆಸಿ ಕಂಪ್ಯೂಟರ್ ಮತ್ತು ನಕಲಿ ಛಾಪಾಕಾಗದ ವಶಕ್ಕೆ ಪಡೆದಿದ್ದಾರೆ.
ನಕಲಿ ಸ್ಟ್ಯಾಂಪ್ ಸೃಷ್ಟಿ ಹಿಂದೆ ಬೃಹತ್ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ರು. ಅಲ್ಲದೇ ಪೊಲೀಸರು ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ರಮೇಶ್‍ನನ್ನು ಬಂಧನ ಮಾಡಿದ್ದಾರೆ. ಆದ್ರೆ ಇ-ಸ್ಟ್ಯಾಂಪ್ ವಿತರಣಾ ಕೇಂದ್ರದ ಮಾಲೀಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.
ದಾವಣಗೆರೆಯಲ್ಲಿ ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದ ರೈತ ಮುಖಂಡ ದೇವರಾಜ್ ಅಕ್ರಮವನ್ನ ಈಗ ಪಬ್ಲಿಕ್ ಟಿವಿ ಬಯಲಿಗೆಳೆದಿದೆ.