ಹಾವೇರಿ: ಆಸ್ಪತ್ರೆಗೆ ಕಟ್ಟಬೇಕಿದ್ದ 50 ಸಾವಿರ ರೂ. ಕಳೆದುಕೊಂಡ ಮಹಿಳೆಗೆ ಪೊಲೀಸರು ಹಾಗೂ ಗ್ರಾಮಸ್ಥರು ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ಗುತ್ತಲ ಪಟ್ಟಣದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಆಸ್ಪತ್ರೆಗೆ ಕಟ್ಟಬೇಕಿದ್ದ 50 ಸಾವಿರ ರೂ. ಹಣವನ್ನು ಯಾರೋ ಬಸ್ ನಲ್ಲಿ ಕಳ್ಳತನ ಮಾಡಿದ್ದಾರೆ. ಆದರೆ ಮಹಿಳೆಗೆ ಗುತ್ತಲ ಠಾಣೆಯ ಪೊಲೀಸರು ಹಾಗೂ ಗ್ರಾಮಸ್ಥರು ಹಣ ಸಂಗ್ರಹಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.
ಮಹಿಳೆ ಹಾವೇರಿ ತಾಲೂಕು ಹಾವನೂರು ಗ್ರಾಮದ ತನ್ನ ತವರು ಮನೆಯಿಂದ 50 ಸಾವಿರ ರೂ. ತೆಗೆದುಕೊಂಡು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಗೆ ಕಟ್ಟಲು ಹೋಗುತ್ತಿದ್ದರು. ಗುತ್ತಲ ಪಟ್ಟಣದಿಂದ ಹಾವೇರಿ ಬಸ್ ಹತ್ತಿದ ಅವರು ಕೇವಲ ನಿಮಿಷಗಳಲ್ಲಿ ಹಣ ಕಳೆದುಕೊಂಡಿದ್ದಾರೆ. ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರ ಚೆಕ್ ಮಾಡಿದ್ರೂ ಹಣ ಸಿಗಲಿಲ್ಲ.
ಬಳಿಕ ಮಹಿಳೆಗೆ ಠಾಣೆಯ ಪಿಎಸ್‍ಐ ಶಂಕರಗೌಡ 5,000 ರೂ. ನೀಡಿದ್ದರು. ಅದಲ್ಲದೆ ಗುತ್ತಲ ಗ್ರಾಮದ ಜನತೆ ಹಾಗೂ ಲಾರಿ ಮಾಲೀಕ ಸಂಘದವರು ಒಟ್ಟಾರೆ 13,000 ಹೀಗೆ ಗ್ರಾಮದ ಜನರು ಸೇರಿ ಆರ್ಥಿಕ ಸಹಾಯ ಮಾಡಿದ್ದಾರೆ.
ವಿಜಯಲಕ್ಷ್ಮಿ ಗುತ್ತಲ ಠಾಣೆಯ ಪೊಲೀಸರು, ವರ್ತಕರು, ಗುತ್ತಿಗೆದಾರರು, ಸೇರಿದಂತೆ ಅಂಗಡಿ ಹಾಗೂ ಗ್ರಾಮದ ಜನರು ವಂತಿಕೆ ಹಾಕಿ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.