ಬೆಂಗಳೂರು: ಮರವೊಂದಕ್ಕೆ 13 ರಂಧ್ರಗಳನ್ನ ಕೊರೆದು, ಅದರಲ್ಲಿ ಕೆಮಿಕಲ್ ಇಟ್ಟು ಮರವನ್ನ ಕೊಲ್ಲುವ ಪ್ರಯತ್ನ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಮಲ್ಲೇಶ್ವರಂನ ಈಜುಕೊಳ ಬಡಾವಣೆಯ 7ನೇ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮರವನ್ನ ಕೊಲ್ಲೋದಕ್ಕೆ ಮುಂದಾಗಿದ್ದ ಪಾಪಿಗಳು ಯಾರು ಅಂತ ತಿಳಿದು ಬಂದಿಲ್ಲ. ಹತ್ತು ವರ್ಷದ ಹಳೆಯ ಮರವನ್ನ ಕೊಲ್ಲಲು ಇಂತಹ ಕೃತ್ಯ ನಡೆಸಲಾಗಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಮರದಡಿ ಪ್ಲಾಸ್ಟಿಕ್ ನಲ್ಲಿ ಕೆಮಿಕಲ್ ತುಂಬಿಟ್ಟಿರುವುದರಿಂದ ಮರ ತನ್ನ ಗುಣಮಟ್ಟವನ್ನ ಕಳೆದುಕೊಂಡಿದ್ದು, ಕೆಳಭಾಗದ ಪದರ ಬಿರುಕು ಬಿಟ್ಟಂತೆ ಆಗಿದೆ.
Advertisement
Advertisement
ಮರಕ್ಕೆ ರಂಧ್ರಗಳನ್ನ ಹಾಕಿರುವುದು ಅಲ್ಲಿನ ಸ್ಥಳೀಯ ಸುಂದರ್ ರಾಜ್ ಎಂಬವವರು ನೋಡಿ, ಬಿಬಿಎಂಪಿಯ ಅರಣ್ಯಾಧಿಕಾರಿಗಳಿಗೆ ಹಾಗೂ ಮರ ತಜ್ಞರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಬಂದ ಮರ ತಜ್ಞ ವಿಜಯ್ ರಂಧ್ರಗಳನ್ನ ಮುಚ್ಚಿ, ಮರ ಬೆಳವಣಿಗೆಗೆ ಔಷಧಿಯನ್ನ ನೀಡಿ ಮರ ರಕ್ಷಣೆಗೆ ಮುಂದಾಗಿದ್ದಾರೆ. ಈ ಹಿಂದೆ ಮನೆಯ ಸೌಂದರ್ಯಕ್ಕಾಗಿ ಮರ ಅಡ್ಡಿಯಾಗ್ತಿದೆ ಎಂದು ಆರ್.ಆರ್. ನಗರದಲ್ಲಿ ಒಬ್ಬರು ವಿಷಕಾರಿ ಇಂಜೆಕ್ಷನ್ ನೀಡಿ, ಮರವನ್ನ ಕೊಲ್ಲುಲು ಮುಂದಾಗಿದ್ದರು. ಈ ಬೆನ್ನಲ್ಲೇ ಇದೀಗ ಮತ್ತೊಂದು ಕೃತ್ಯ ಬಯಲಾಗಿದೆ.