ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ಅಂಕಣಕಾರ, ವಿಮರ್ಶಕ, ನಾಟಕಕಾರ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸಾಹಿತ್ಯ ಪರಿಷತ್ ನಲ್ಲಿ ನಡೆದ ಸಭೆಯಲ್ಲಿ ಹೆಚ್.ಎಸ್. ವೆಂಕಟೇಶ ಮೂರ್ತಿ ಹೆಸರು ಅಂತಿಮಗೊಳಿಸಲಾಗಿದೆ. ಕಲಬುರಗಿಯಲ್ಲಿ 2020ರ ಫೆಬ್ರವರಿ 5, 6 ಮತ್ತು 7 ರಂದು 3 ದಿನಗಳ ಕಾಲ ನಡೆಯಲಿದೆ. ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಸಿಲ ನಾಡಿನಲ್ಲಿ ಕನ್ನಡದ ಕಲರವಕ್ಕೆ ರಂಗು ಬಂದತ್ತಾಗಿದೆ.
32 ವರುಷಗಳ ನಂತರ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಕ್ಯಾಂಪಸ್‍ನಲ್ಲಿ ಸಮ್ಮೇಳನ ನಡೆಸುವ ನಿರ್ಣಯವಾಗಿದ್ದು ಸಿದ್ಧತೆಗಳು ನಡೆಯುತ್ತಿದೆ.
ಭದ್ರಾವತಿಯಲ್ಲಿ ಡಿಪ್ಲೋಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದ ವೆಂಕಟೇಶ ಮೂರ್ತಿಯವರು 1966ರಿಂದ 1971ರ ವರೆಗೆ ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರು. 1971ರಿಂದ 1973ರವರೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಅಧ್ಯಯನ ನಡೆಸಿ 1973ರಿಂದ 2000ದ ವರೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ, ಅಲ್ಲೇ ಪ್ರಾಧ್ಯಾಪಕನಾಗಿ ನಿವೃತ್ತಿ ಪಡೆದರು. 2000ದಿಂದ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.