ಮಹಾನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದಿನೇ ದಿನೇ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಈ ಟ್ರಾಫಿಕ್ ನಿಯಂತ್ರಣಕ್ಕಾಗಿ ಹೊಸ ಹೊಸ ರೀತಿಯ ಯೋಜನೆಗಳನ್ನು ಕೂಡ ಹಾಕಿಕೊಳ್ಳಲಾಗುತ್ತದೆ. ಉದಾಹರಣೆಗೆ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೌದು, ದೇಶದ ವಿವಿಧೆಡೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಮೆಟ್ರೋ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹೀಗಿರುವಾಗ ಮುಂಬೈ ಮಹಾನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕಾಗಿ ಪಾಡ್ ಟ್ಯಾಕ್ಸಿ (Pod Taxi) ಜಾರಿಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಇತ್ತೀಚಿಗೆ ಮಾತನಾಡಿ, ಬುಲೆಟ್ ರೈಲು ನಿಲ್ದಾಣ ಮತ್ತು ಹೈಕೋರ್ಟ್ ಮಧ್ಯ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರ್ಲಾ ಮತ್ತು ಬಾಂಧ್ರಾ ರೈಲು ನಿಲ್ದಾಣಗಳ ಮಧ್ಯೆ ಪಾಡ್ ಟ್ಯಾಕ್ಸಿ ನಿರ್ಣಾಯಕ ಕಾರ್ಯ ನಿರ್ವಹಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈ ನಗರದಾದ್ಯಂತ ಈಗಾಗಲೇ ಟ್ರಾಫಿಕ್ ನಿಯಂತ್ರಣಕ್ಕಾಗಿ ಹಾಗೂ ಸಾರಿಗೆ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಪಾಡ್ ಟ್ಯಾಕ್ಸಿ ಸೇವೆಯನ್ನ ಪರಿಚಯಿಸಲಾಗುವುದೆಂದು ದೇವೇಂದ್ರ ಫಡ್ನವೀಸ್ (Devendra Fadnavis) ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುಂಬೈ ಹೈಕೋರ್ಟ್ ಹಾಗೂ ಬುಲೆಟ್ ರೈಲು ನಿಲ್ದಾಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕುರ್ಲಾ ಹಾಗೂ ಬಾಂಧ್ರಾ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಈ ಹಿನ್ನೆಲೆ ಪಾಡ್ ಟ್ಯಾಕ್ಸಿ ಸೇವೆಯಿಂದ ಈ ನಿಲ್ದಾಣಗಳ ನಡುವಿನ ಜನಸಂದಣಿ ಕಡಿಮೆ ಹಾಗೂ ಸೇವೆ ಕಲ್ಪಿಸಲು ಸಹಾಯಕವಾಗುತ್ತದೆ.
ಬಾಂದ್ರಾ ಮತ್ತು ಕುರ್ಲಾ ರೈಲು ನಿಲ್ದಾಣವು ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈ ಸ್ಪೀಡ್ ರೈಲು ಕಾರಿಡಾರ್ ನ ಆರು ಪ್ಲಾಟ್ಫಾರ್ಮ್ ಗಳನ್ನು ಹೊಂದಿರುವ ಭೂಗತ ರೈಲು ನಿಲ್ದಾಣವಾಗಿದೆ. ಅಲ್ಲದೆ ಮುಂಬೈನಲ್ಲಿ ಅಸ್ತಿತ್ವದಲ್ಲಿರುವ ಕೋರ್ಟ್ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಪೂರ್ವ ಬಾಂಧ್ರಾದಲ್ಲಿ 30 ಎಕರೆಗಳಲ್ಲಿ ಹೊಸ ಹೈಕೋರ್ಟ್ ನಿರ್ಮಿಸಲು ಯೋಜಿಸಲಾಗಿದೆ. ಹೀಗಾಗಿ ಇದೀಗ ಯೋಜಿಸಲಾಗಿರುವ ಪಾಡ್ ಟ್ಯಾಕ್ಸಿ ಸೇವೆಯನ್ನು ಬಾಂದ್ರಾ ಹಾಗೂ ಕುರ್ಲಾ ನಡುವೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗುವುದು ಮತ್ತು ಪಾಡ್ ಟ್ಯಾಕ್ಸಿ ಸೇವೆ ಸೇರಿದಂತೆ ಮುಂಬೈನ ಎಲ್ಲಾ ಸಾರಿಗೆ ವಿಧಾನಗಳಿಗೂ ಒಂದೇ ಕಾರ್ಡ್ ಜಾರಿಗೆ ತರಲು ನಿರ್ಧರಿಸಲಾಗಿದೆ.
- ಪಾಡ್ ಟ್ಯಾಕ್ಸಿ ಹೇಗಿರುತ್ತೆ?
ಇದು ತಡೆರಹಿತ ಸಂಚಾರ ವ್ಯವಸ್ಥೆಯಾಗಿದ್ದು, ಚಾಲಕ ರಹಿತವಾಗಿರುತ್ತದೆ. ಇದು ಮೆಟ್ರೋರೀತಿಯಲ್ಲಿಯೇ ಕಾರ್ಯ ನಿರ್ವಹಿಸಲಿದ್ದು, ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿರುತ್ತದೆ. ಜೊತೆಗೆ ಇದು ಚಿಕ್ಕದೊಂದು ವಾಹನವಾಗಿದ್ದು, ಪ್ರಯಾಣದಲ್ಲಿ ಎರಡರಿಂದ ಆರು ಜನರನ್ನು ಮಾತ್ರ ಕೊಂಡೊಯ್ಯಲು ಅವಕಾಶವಿರುತ್ತದೆ. ಮೆಟ್ರೋರೀತಿಯಲ್ಲಿ ಹಳಿಗಳ ಮೇಲೆ ಇದು ಸಂಚರಿಸುತ್ತದೆ. ಇದು ಒಂದು ಖಾಸಗಿ ಟ್ಯಾಕ್ಸಿ ಸೇವೆಯಂತೆ ಕಾರ್ಯನಿರ್ವಹಿಸಲಿದ್ದು, ದೂರದ ಸ್ಥಳಗಳಿಗೆ ಕಡಿಮೆ ಸಮಯದಲ್ಲಿ ಕೊಂಡೊಯುತ್ತದೆ.
- ಇದರ ಲಕ್ಷಣಗಳೇನು?
ಮುಖ್ಯವಾಗಿ ಪ್ರಯಾಣಿಕರು ತಮಗೆ ಟ್ಯಾಕ್ಸಿಯ ಅಗತ್ಯವಿದ್ದಾಗ ಈ ಪಾಡ್ ಟ್ಯಾಕ್ಸಿಗೆ ಕರೆ ಮಾಡಬಹುದು. ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ಟ್ಯಾಕ್ಸಿ ಪ್ರಯಾಣಿಕರನ್ನು ಕೊಂಡೊಯುತ್ತದೆ.
ಇದು ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು, ಜಿಪಿಎಸ್ ಹಾಗೂ ಕಂಪ್ಯೂಟರ್ ವ್ಯವಸ್ಥೆಗಳನ್ನ ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಪಾಡ್ ಟ್ಯಾಕ್ಸಿಗೆ ಪ್ರತ್ಯೇಕವಾದ ಹಳಿ ಇರಲಿದ್ದು, ಮೆಟ್ರೋದಂತೆ ಎತ್ತರದಲ್ಲಿ ಚಲಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
- ಟ್ರಾಫಿಕ್ ನಿಯಂತ್ರಣ ಹೇಗೆ?
ಪಾಡ್ ಟ್ಯಾಕ್ಸಿ ಸಂಚರಿಸಲು ವಿಭಿನ್ನ ಹಳಿಗಳನ್ನ ಹೊಂದಿರುತ್ತದೆ. ಉದಾಹರಣೆಗೆ ಖಾಸಗಿ ಟ್ಯಾಕ್ಸಿ ಅಥವಾ ಇನ್ನಿತರ ಯಾವುದೇ ವಾಹನವನ್ನು ನೀವು ಬುಕ್ ಮಾಡಿದಾಗ ಆಗ ಸಂಚಾರದಟ್ಟಣೆಯ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಪಾಡ್ ಟ್ಯಾಕ್ಸಿಗಳು ಈ ಸಮಸ್ಯೆನ ಬಗೆಹರಿಸುವುದರ ಜೊತೆಗೆ ಇದು ಪ್ರವಾಸಿ ತಾಣಗಳಿಗೂ ಕೊಂಡೊಯ್ಯುತ್ತದೆ. ವಿಮಾನ ನಿಲ್ದಾಣ, ಪ್ರವಾಸಿ ತಾಣಗಳಂತಹ ಜನದಟ್ಟಣೆಯ ಪ್ರದೇಶದಲ್ಲಿ ಈ ಟ್ಯಾಕ್ಸಿ ಸೇವೆಗಳು ತುಂಬಾ ಅನುಕೂಲಕರವಾಗಲಿದೆ ಹಾಗೂ ವೆಚ್ಚಕ್ಕೆ ಹೋಲಿಸಿದರೆ ಇದು ಒಳ್ಳೆಯದು ಎನ್ನಲಾಗುತ್ತದೆ.
ಈ ಪಾಡ್ ಟ್ಯಾಕ್ಸಿ ಸೇವೆಯನ್ನು ಮೊದಲ ಬಾರಿಗೆ ಯುಎಇ ನಗರದ ಮಸ್ದಾರ್ ಎಂಬಲ್ಲಿ ಮೊದಲು ಬಳಸಲಾಯಿತು. ಯುನೈಟೆಡ್ ಕಿಂಗ್ಡಮ್ ನ ವಿಮಾನ ನಿಲ್ದಾಣದಲ್ಲಿ, ಟರ್ಮಿನಲ್ ಗಳಲ್ಲಿ ಹಾಗೂ ಪಾರ್ಕಿಂಗ್ ನಡುವೆ ಪ್ರಯಾಣಿಕರ ಸಂಚಾರಕ್ಕೆ ಈ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು.
ಇನ್ನು ಈಗಾಗಲೇ ಅಮೃತ್ಸರದ ಸುವರ್ಣ ದೇವಾಲಯದ ಬಳಿ ಪಾಡ್ ಟ್ಯಾಕ್ಸಿ ಯೋಜನೆ ಜಾರಿಗೆ ತರುವ ಕುರಿತು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.