ಬೆಂಗಳೂರು: ಮಾಜಿ ಸಿಎಂ ಬಿಎಸ್‌ವೈ (BS Yediyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸೇರಿ ನಾಲ್ವರು ಆರೋಪಿಗಳಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ಪ್ರಕರಣ ಸಂಬಂಧ ಹೈಕೋರ್ಟ್ ಟ್ರಯಲ್‌ಗೆ ಅನುಮತಿ ನೀಡಿತ್ತು. ಇದೀಗ 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಿ.ಎಸ್ ಯಡಿಯೂರಪ್ಪ ಸೇರಿದಂತೆ 4 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಗೆ ಸಮನ್ಸ್ ಜಾರಿ ಮಾಡಿದ್ದು, ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ತಿಳಿಸಿದೆ.ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನಸ್ತೋಮ – ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ವೃದ್ಧೆ ಸಾವು!
ಇದಕ್ಕೂ ಮುನ್ನ ಕೆಳಹಂತದ ನ್ಯಾಯಾಲಯ ಆರೋಪ ನಿಗದಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಬಿಎಸ್‌ವೈ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಯಡಿಯೂರಪ್ಪನವರ ಅರ್ಜಿಯನ್ನು ವಜಾಗೊಳಿಸಿ ಟ್ರಯಲ್‌ಗೆ ಅನುಮತಿ ನೀಡಿತ್ತು.
ಏನಿದು ಪ್ರಕರಣ?
ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಬಿಎಸ್‌ವೈ ಮೇಲಿದೆ. ಸಹಾಯ ಕೇಳಿ ಬಂದಾಗ ಯಡಿಯೂರಪ್ಪನವರು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024ರಲ್ಲಿ ಬಾಲಕಿಯ ತಾಯಿ ದೂರು ನೀಡಿದ್ದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO Case) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು. ಸಾಕ್ಷ್ಯ ನಾಶಪಡಿಸಿದ ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪಗಳ ಮೇಲೆ ಯಡಿಯೂರಪ್ಪ ಮತ್ತು ಅವರ ಮೂವರು ಸಹಾಯಕರ ವಿರುದ್ಧ ಜೂನ್ 2024ರಲ್ಲಿ ಸಿಐಡಿ 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಈ ಪ್ರಕರಣದಲ್ಲಿ ದೂರು ನೀಡಿದ್ದ ಬಾಲಕಿಯ ತಾಯಿ ಮತ್ತು ಆ ಬಾಲಕಿ ಇಬ್ಬರೂ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ. ಬಾಲಕಿಯ ತಾಯಿ ಮೇ 26, 2024ರಂದು ನಿಧನರಾದರು.ಇದನ್ನೂ ಓದಿ: ತಂತ್ರಜ್ಞಾನ, ಪ್ರತಿಭೆ ಬೆಂಗಳೂರಿನ ಎರಡು ಆಧಾರಸ್ತಂಭಗಳು: ಡಿ.ಕೆ. ಶಿವಕುಮಾರ್

