ಬೆಂಗಳೂರು: ಈರುಳ್ಳಿ ಬೆಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹೆಚ್ಚಳವಾಗಿದೆ. ಕತ್ತರಿಸುವಾಗ ಮಾತ್ರವಲ್ಲದೇ ಖರೀದಿಸುವಾಗ ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್‍ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.
ಪ್ರವಾಹದಿಂದಾಗಿ ಈರುಳ್ಳಿ ಫಸಲು ಇಳಿಮುಖವಾಗಿದ್ದು, ಬೆಲೆ ಹೆಚ್ಚಾಗಿದೆ. ಬೆಂಗಳೂರಿಗೆ ಪ್ರತಿನಿತ್ಯ 3 ಸಾವಿರ ಟನ್‍ಗೂ ಹೆಚ್ಚು ಈರುಳ್ಳಿ ಅಗತ್ಯ ಇದೆ. ಆದರೆ ಅಗತ್ಯಕ್ಕೆ ತಕ್ಕಂತೆ ಈರುಳ್ಳಿ ಪೂರೈಕೆ ಯಾಗುತ್ತಿಲ್ಲ. ಹೀಗಾಗಿಯೇ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹಾಪ್ ಕಾಮ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲಗೌಡ ಹೇಳುತ್ತಾರೆ.
ಈರುಳ್ಳಿ ಬೆಲೆ ಹೆಚ್ಚಳಕ್ಕೆ ಹಿಂದೊಮ್ಮೆ ಸರ್ಕರವೇ ಉರುಳಿ ಬಿದ್ದಿತ್ತು. ಈಗ ಈರುಳ್ಳಿ ಬೆಲೆ ಹೆಚ್ಚಳ ಆಗಿರೋದು ನೋಡಿ ಗೃಹಿಣಿಯರಂತೂ ಪುಲ್ ಶಾಕ್ ಆಗಿದ್ದಾರೆ. ಈರುಳ್ಳಿ ಇಲ್ಲದೇ ಅಡುಗೆ ಮಾಡೋದು ಹೇಗಪ್ಪಾ ಅಂತಾ ಚಿಂತೆಗೀಡಾಗಿದ್ದಾರೆ. ಡಿಸೆಂಬರ್ ಮುಗಿಯೋವರೆಗೆ ಈರುಳ್ಳಿ ದರ ಇಳಿಯುವ ಸಾಧ್ಯತೆ ಇಲ್ಲ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.