ಬೆಂಗಳೂರು: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಡಿಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಂದು ಶಾಕ್ ನೀಡಿದೆ. ಪುತ್ರಿ ಐಶ್ವರ್ಯ ಹೆಸರಿನಲ್ಲಿದ್ದ ಆಸ್ತಿಯ ದಾಖಲೆಯನ್ನು ಜಪ್ತಿ ಮಾಡಿದೆ.
ಸೋಲ್ ಆಂಡ್ ಸೇಲ್ಸ್ ಸೋಲಾರ್ ಕಂಪನಿಯಲ್ಲಿ 78 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಐಶ್ವರ್ಯ ವ್ಯವಹಾರ ಆರಂಭಿಸಿದ್ದರು. ಡಿಕೆಶಿ ಸ್ನೇಹಿತರ ಮೂಲಕ ಹಣವನ್ನು ಉಡುಗೊರೆಯಾಗಿ ಸ್ವೀಕರಿಸಿ ಐಶ್ವರ್ಯ ಈ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.
Advertisement
40 ಕೋಟಿ ರೂ. ಹಣವನ್ನು ಶಿವಕುಮಾರ್ ಸ್ನೇಹಿತರು ಗಿಫ್ಟ್ ಡೀಡ್ ಮಾಡಿದ್ದಾರೆ. ಗಿಫ್ಟ್ ಡೀಡ್ ಮಾಡಿದ ಹಣ ಬೇನಾಮಿಯಾಗಿದ್ದು ಇದು ಶಿವಕುಮಾರ್ ಅವರದ್ದೇ. ಬೇನಾಮಿ ಹಣದ ಮೂಲಕ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
Advertisement
Advertisement
ದಾಖಲೆಗಳನ್ನು ವಶಕ್ಕೆ ಪಡೆದು ಇಡಿ ವಿಚಾರಣೆ ಮುಂದುವರಿಸಿದ್ದು ತನಿಖೆಯ ವೇಳೆ ಇದು ಅಕ್ರಮ ಎನ್ನುವುದು ಸಾಬೀತಾದರೆ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.
Advertisement
ಮಂಗಳವಾರ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಡಿ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಐಶ್ವರ್ಯ ಹೆಸರಿನಲ್ಲಿ ಭಾರೀ ಪ್ರಮಾಣದ ವ್ಯವಹಾರ ನಡೆದಿರುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
ಐಶ್ವರ್ಯ ಖಾತೆಯಿಂದ 108 ಕೋಟಿ ರೂ. ವರ್ಗಾವಣೆ ಆಗಿದೆ. ಪುತ್ರಿಗೆ 24-25 ವರ್ಷವಾಗಿದ್ದರಿಂದ ಇದು ನಂಬಲೂ ಸಾಧ್ಯವಿಲ್ಲ. ಆದರೂ ಈ ಸತ್ಯವನ್ನು ನಂಬಲೇಬೇಕು. ಚಿಕ್ಕ ವಯಸ್ಸಿನಲ್ಲಿ ಈ ಮಟ್ಟದ ಆರ್ಥಿಕ ವ್ಯವಹಾರ ಹೇಗೆ ಸಾಧ್ಯ? ಇದು ಕೇವಲ ಬರೀ 41 ಲಕ್ಷ ರೂ.ಗೆ ಸಂಬಂಧಿಸಿದಲ್ಲ ಸಾಕಷ್ಟು ಆಳವಾಗಿ ತನಿಖೆ ನಡೆಸಬೇಕಿದೆ. ಬೇರೆ ಬೇರೆ ಖಾತೆಯಿಂದ ಸಾಕಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆ ಆಗಿದೆ. 800 ಕೋಟಿ ಅಕ್ರಮ ಹಣ ವರ್ಗಾವಣೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಕರಾಳತೆಯನ್ನು ತೋರಿಸುತ್ತದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ನಟರಾಜ್ ವಾದಿಸಿದರು.
143 ಕೋಟಿ ರೂ. ದಾಖಲೆ ಇಲ್ಲದ ನಗದು ಹಣ ಪತ್ತೆಯಾಗಿದೆ. ಇದು ಕಾನೂನು ಬಾಹಿರ ಹಣವಾಗಿದ್ದು ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಹಣ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದಾಗ 317 ಬ್ಯಾಂಕ್ ಖಾತೆಗಳಲ್ಲಿ ಅವ್ಯವಹಾರ ನಡೆದಿರುವುದು ತಿಳಿಯುತ್ತದೆ ಎಂದಾಗ ಈ ದಾಖಲೆಗಳನ್ನು ನಮಗೆ ನೀಡಿಲ್ಲ ಎಂದು ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನಟರಾಜ್ ಅವರು, ಈಗ ಎಲ್ಲ ದಾಖಲೆಗಳು, ವಿವರಗಳನ್ನು ಬಹಿರಂಗಪಡಿಸಲು ಇದು ಟ್ರಯಲ್ ಕೋರ್ಟ್ ಅಲ್ಲ ಎಂದು ಉತ್ತರಿಸಿದರು.
ಈ ಪ್ರಕರಣಕ್ಕೆ ಸಾಕಷ್ಟು ಮಹತ್ವ ಇದ್ದು, ಗಿಫ್ಟ್ ಡಿಡ್ ಮೂಲಕ ಪಡೆದು ಮತ್ತೊಬ್ಬರಿಗೆ ವರ್ಗಾವಣೆಯಾಗಿದೆ. ಒಂದು ಕಡೆಯಿಂದ ಪಡೆದು ಮತ್ತೊಂದು ಕಡೆ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ. ಸೆ.13 ರಂದು ನಾವು 4 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಕಸ್ಟಡಿಗೆ ನೀಡಿದ್ದರೂ ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಚಾರಣೆ ನಡೆಸಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ನಟರಾಜ್ ಮನವಿ ಮಾಡಿಕೊಂಡಿದ್ದರು.
ಸೋಲ್ ಆಂಡ್ ಸೇಲ್ಸ್ ಸೋಲಾರ್ ಕಂಪನಿಯಲ್ಲಿ 78 ಕೋಟಿ ರೂ. ಹೂಡಿಕೆ ಮಾಡಿರುವ ಐಶ್ವರ್ಯ ಗ್ಲೋಬಲ್ ಕಾಲೇಜಿನಲ್ಲಿ ಟ್ರಸ್ಟಿಯಾಗಿದ್ದಾರೆ. ಸೆ.12 ರಂದು ಇಡಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು.
ಏನಿದು ಗಿಫ್ಟ್ ಡೀಡ್?
ಸ್ವಯಂ ಪ್ರೇರಿತವಾಗಿ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ತನ್ನಲ್ಲಿದ್ದ ಆಸ್ತಿ ಅಥವಾ ಹಣವನ್ನು ಯಾವುದೇ ಆಸ್ತಿ, ಹಣ ಪಡೆಯದೇ ಉಚಿತವಾಗಿ ದಾನ ನೀಡುವುದಕ್ಕೆ ಗಿಫ್ಟ್ ಡೀಡ್ ಎಂದು ಕರೆಯಲಾಗುತ್ತದೆ. ಒಮ್ಮೆ ಆಸ್ತಿ ಮೇಲೆ ಗಿಫ್ಟ್ ಡೀಡ್ ಸರಿಯಾಗಿ ಬರೆದು ನೋಂದಣಿ ಮಾಡಿಕೊಂಡರೆ ಆಗ ಆಸ್ತಿಯ ಮೇಲಿನ ಮೂಲ ಮಾಲೀಕನ ಎಲ್ಲಾ ಹಕ್ಕುಗಳು ದಾನ ಪಡೆದುಕೊಂಡವರಿಗೆ ವರ್ಗಾವಣೆಯಾಗುತ್ತದೆ. ಒಮ್ಮೆ ನೋಂದಣಿಯಾದ ಬಳಿಕ ಮೂಲ ಮಾಲೀಕ ಅಥವಾ ಆತನ ಸಂಬಂಧಿಕರು ಆ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಲು ಅವಕಾಶವಿಲ್ಲ.