– ಮತ್ತೆ ಸುದೀರ್ಘ ವಾದ ಮಂಡಿಸಿದ ನಟರಾಜ್
– 8 ತಿಂಗಳಲ್ಲಿ ಆಂಜನೇಯನ ಹೇಳಿಕೆ ಮೂರು ಬಾರಿ ಬದಲಾಗಿದೆ
– ಜಾಮೀನು ನೀಡಿದ್ರೆ ಸಾಕ್ಷ್ಯ ನಾಶ
ನವದೆಹಲಿ: “ಆರ್ಥಿಕ ಅಪರಾಧ ಉದ್ದೇಶ ಪೂರ್ವಕವಾಗಿ ಇರುತ್ತದೆ. ಮೂಲಗಳನ್ನು ಬಹಿರಂಗ ಪಡಿಸುತ್ತಿಲ್ಲ. ಮೂಲವೇ ಇಲ್ಲ ಎಂದರೆ ಬೆಳೆಯೋದು ಹೇಗೆ? ಅಡಿಪಾಯ ಇಲ್ಲದೆ ಕಟ್ಟಡ ನಿಲ್ಲುವುದಿಲ್ಲ. ಹಣದ ಮೂಲ ಎಂಬುದು ಅಡಿಪಾಯ. ಕೋಟೆ ಕಟ್ಟಲು ಕಲ್ಲುಬೇಕು. ನೋಟುಗಳಿಂದ ಕಟ್ಟಲಾಗದು. ಆದಾಯದ ಮೂಲ ತೋರಿಸದೇ ಆಸ್ತಿ ಮಾಡುವುದು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ” ಇದು ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದ ಶೈಲಿ
ಇಂದು ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟಿನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಇದು ಸಹ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ದೀರ್ಘ ವಾದ ಮಂಡಿಸಿ ಜಾಮೀನು ನೀಡಬೇಡಿ ಎಂದು ಕೋರ್ಟಿನಲ್ಲಿ ಮನವಿ ಮಾಡಿಕೊಂಡರು.
Advertisement
Advertisement
ನಟರಾಜ್ ವಾದ ಹೀಗಿತ್ತು:
ಅಕ್ರಮ ಆಸ್ತಿಗೆ ತೆರಿಗೆ ಪಾವತಿಸಿ ಸಕ್ರಮ ಮಾಡಿಕೊಳ್ಳಲಾಗಿದೆ. ಸಕ್ರಮ ಮಾಡಿಕೊಂಡಿರುವ ಆಸ್ತಿಯ ಮೂಲ ಪತ್ತೆಯಾಗಬೇಕಿದೆ. ಈಗಾಗಲೇ ಡಿಕೆಶಿಯವರ ಕೆಲವೊಂದು ಆಸ್ತಿ ಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಬೇಕಿದ್ದು, ಸುದೀರ್ಘ ವಿಚಾರಣೆಯ ಅವಶ್ಯಕತೆ ಇದೆ. ಆಸ್ತಿ ಎಷ್ಟಿದೆ ಎನ್ನುವುದು ಮುಖ್ಯವಲ್ಲ. ನಾವು ಆಸ್ತಿಯ ಮೂಲವನ್ನು ತನಿಖೆ ಮಾಡುತ್ತಿದ್ದೇವೆ. ಆಸ್ತಿಯ ಮೂಲದ ತನಿಖೆಗಾಗಿ ನಮಗೆ ಡಿ.ಕೆ.ಶಿವಕುಮಾರ್ ಅವರನ್ನು ನಮ್ಮ ವಶಕ್ಕೆ ನೀಡಬೇಕು.
Advertisement
ನಾವು ವಶಪಡಿಸಿಕೊಂಡಿರುವ ಆಸ್ತಿಗೆ ಡಿ.ಕೆ.ಶಿವಕುಮಾರ್ ತೆರಿಗೆ ಕಟ್ಟಿದ್ದಾರೆ. ಆಸ್ತಿ ಮೂಲ ಅಕ್ರಮವೋ, ಸಕ್ರಮವೋ ಎಂಬುವುದು ಗೊತ್ತಾಗಬೇಕಿದೆ. ಸೆಕ್ಷನ್ 5ರ ಪ್ರಕಾರ ಅಕ್ರಮ ಆಸ್ತಿ ಸರ್ಕಾರಕ್ಕೆ ಸೇರುತ್ತದೆ. ಅಕ್ರಮ ಆಸ್ತಿಯನ್ನು ವ್ಯಕ್ತಿ ಅನುಭವಿಸುವಂತಿಲ್ಲ. ಅಕ್ರಮ ಆಸ್ತಿ ರಾಷ್ಟ್ರೀಯ ಆಸ್ತಿ ಆಗುತ್ತದೆ. ಅಕ್ರಮ ಆಸ್ತಿಯ ಬಗ್ಗೆ ಪ್ರಶ್ನಿಸಿದಾಗ ಡಿ.ಕೆ.ಶಿವಕುಮಾರ್ ನಾಲ್ಕು ಗಂಟೆ ಮೌನವಾಗಿದ್ದರು. ಮೌನವಾಗಿರೋದು ಡಿಕೆಶಿಯವರ ಹಕ್ಕು, ತನಿಖೆ ಮಾಡೋದು ನಮ್ಮ ಹಕ್ಕು. ನಮ್ಮ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಿದೆ. ಸಾಮಾನ್ಯ ಪ್ರಶ್ನೆಗಳಿಗೂ ಉತ್ತರಿಸದೇ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸಹಕರಿಸಿಲ್ಲ. ಕೇವಲ ಅಪ್ರಸ್ತುತ ಉತ್ತರಗಳನ್ನು ನೀಡುತ್ತಾ ವಿಚಾರಣೆಗೆ ಸಹಕರಿಸಿಲ್ಲ. ಹಾಗಾಗಿ ವಿಚಾರಣೆ ನಮಗೆ ಸುದೀರ್ಘ ಸಮಯ ಬೇಕಿದೆ.
Advertisement
ಕೃಷಿ ಭೂಮಿ ಮಾತ್ರವಲ್ಲದೇ ಕೃಷಿಯೇತರ ಆಸ್ತಿಗಳ ಬಗ್ಗೆ ತನಿಖೆ ನಡೆಯಬೇಕಿದೆ. ಅಧಿಕಾರಿಗಳು ವಶಕ್ಕೆ ಪಡೆದ ನಗದಿಗೆ ನಮ್ಮ ಇನ್ನು ಉತ್ತರ ಸಿಕ್ಕಿಲ್ಲ. 27 ಆಸ್ತಿ ಖರೀದಿಯಾಗಿದ್ದು, 10 ಆಸ್ತಿ ತಂದೆಯಿಂದ ಸಂಸದ ಡಿ.ಕೆ.ಸುರೇಶ್ ಅವರಿಗೆ ಬಂದಿದೆ. ನ್ಯಾಯಾಲಯ ಎಲ್ಲಾ ಆಯಾಮಗಳಲ್ಲಿ ಸಾಕ್ಷ್ಯಗಳನ್ನು ಪರಿಗಣಿಸಬೇಕಿದೆ. ತನಿಖೆ ಹಂತದಲ್ಲಿ ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ. ಒಂದು ವೇಳೆ ಜಾಮೀನು ನೀಡಿದ್ರೆ ಪಿತೂರಿ ನಡೆಯಲಿದ್ದು, ತನಿಖೆಗೆ ಅಡ್ಡಿಯಾಗಲಿದೆ. ಸಾಕ್ಷಿಗಳನ್ನು ತಿರುಚಬಹುದು, ಪ್ರಭಾವ ಬೀರಬಹುದು. ಈಗಾಗಲೇ ಐಟಿ ತನಿಖೆ ವೇಳೆಯ ಕೆಲವು ಸಾಕ್ಷಿಗಳು ತಿರುಗಿ ಬಿದ್ದಿದ್ದು ಜಾಮೀನು ನೀಡಬಾರದು ಎಂದು ನಟರಾಜನ್ ವಾದ ಮಂಡಿಸಿದರು.
ಐಟಿ ತನಿಖೆ ವೇಳೆ 8 ತಿಂಗಳಲ್ಲಿ ಆಂಜನೇಯ ಮೂರು ಬಾರಿ ಹೇಳಿಕೆ ಬದಲಾಗಿದೆ. ಡಿಕೆ ಶಿವಕುಮಾರ್ ಗೆ ಸಾಕ್ಷಿಗಳನ್ನು ತಿರುಚಿರುವ ಉದಾಹರಣೆಗಳು ನಮ್ಮ ಮುಂದಿವೆ. ತನಿಖೆಯನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ಸಾಕ್ಷ್ಯಗಳು ತಪ್ಪೊಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ತನಿಖೆಯ ನಂತರ ಅಕ್ರಮದ ಪ್ರಮಾಣ ತಿಳಿಯಬೇಕಿದ್ದು, ಡಿ.ಕೆ.ಶಿವಕುಮಾರ್ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಕ್ರಮ 800 ಕೋಟಿಯೋ ಅದಕ್ಕಿಂತ ಹೆಚ್ಚೋ ಎಂಬುದನ್ನು ತನಿಖೆ ಮಾಡಲು ಅವಕಾಶ ನೀಡಬೇಕು.
ಡಿಕೆ ಶಿವಕುಮಾರ್ 18 ದಿನದಲ್ಲಿ 4 ಗಂಟೆ ಮಾತ್ರ ವಿಚಾರಣೆಗೆ ಸಹಕರಿಸಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಡಿ.ಕೆ.ಶಿವಕುಮಾರ್ ಮೌನದ ಮೂಲಕ ಉತ್ತರಿಸಿದ್ದಾರೆ. ವಿಚಾರಣೆ ವೇಳೆ ಬೇಕಾಬಿಟ್ಟಿಯಾಗಿ ನೀಡಿದ್ದರಿಂದ ತನಿಖೆ ಪೂರ್ಣವಾಗಿಲ್ಲ. ಸೆಕ್ಷನ್ 45ರ ಪ್ರಕಾರ ಚಿದಂಬರಂ ಅವರಿಗೂ ನ್ಯಾಯಾಲಯ ಜಾಮೀನು ಕೊಟ್ಟಿಲ್ಲ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರಿಗೂ ಜಾಮೀನು ನೀಡಬಾರದು.
ಅಕ್ರಮ ಹಣ ವರ್ಗಾವಣೆ ರಾಷ್ಟ್ರೀಯ ಭದ್ರತೆಗೆ ಸಂಚಕಾರ. ರಾಷ್ಟ್ರೀಯ ಭದ್ರತೆಯಿಂದಲೂ ಈ ಪ್ರಕರಣ ಪರಿಗಣಿಸಬೇಕು. ರಾಷ್ಟ್ರೀಯ ಭದ್ರತೆ ಆರೋಪಿ ದಕ್ಕೆ ತಂದಿದ್ದಾರೆ. ಇದನ್ನು ಉಕ್ಕಿನ ಕೈಗಳಿಂದ ನಿಯಂತ್ರಿಸಬೇಕು. ಕೊಲೆ ತಕ್ಷಣದ ಕೋಪದಿಂದ ಸಂಭವಿಸಬಹುದು. ಆದರೆ ಆರ್ಥಿಕ ಅಪರಾಧ ಉದ್ದೇಶ ಪೂರ್ವಕವಾಗಿ ಇರುತ್ತದೆ. ಮೂಲಗಳನ್ನ ಬಹಿರಂಗ ಪಡಿಸುತ್ತಿಲ್ಲ. ಮೂಲವೇ ಇಲ್ಲ ಎಂದರೆ ಬೆಳೆಯೋದು ಹೇಗೆ. ಅಡಿಪಾಯ ಇಲ್ಲದೆ ಕಟ್ಟಡ ನಿಲ್ಲುವುದಿಲ್ಲ. ಹಣದ ಮೂಲ ಎಂಬುದು ಅಡಿಪಾಯ. ಕೋಟೆ ಕಟ್ಟಲು ಕಲ್ಲುಬೇಕು. ನೋಟುಗಳಿಂದ ಕಟ್ಟಲಾಗದು. ಆದಾಯದ ಮೂಲ ತೋರಿಸದೇ ಆಸ್ತಿ ಮಾಡುವುದು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ.
ನ್ಯಾಯಾಲಯದ ಸಮಯ ಮುಗಿತು. ಬೇಗ ನಿಮ್ಮ ವಾದವನ್ನು ಮುಗಿಸಿ, ನಮಗೂ ಸ್ವಲ್ಪ ಟೈಂ ನೀಡಿದರೆ ನಾವು ವಾದ ಮಂಡಿಸುತ್ತೇವೆ. ನೀವೇ ತೀರ್ಪು ನೀಡುತ್ತಿದ್ದೀರಿ ಎಂದು ಅಭಿಷೇಕ್ ಮನುಸಿಂಘ್ವಿ ಇಡಿ ಪರ ವಕೀಲರಿಗೆ ತಮಾಷೆ ಮಾಡಿದರು. ಕೊನೆಗೆ 45 ನಿಮಿಷಗಳ ವಾದವನ್ನು ಮುಗಿಸಿದ ಬಳಿಕ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲು ಆರಂಭಿಸಿದರು.