Connect with us

Latest

ಮೋದಿ ನೇತೃತ್ವದಲ್ಲಿ ದೇಶ ಹಿಂದಕ್ಕೆ ಹೋಗ್ತಿದೆ – ಮೊದಲ ಅಧ್ಯಕ್ಷೀಯ ಭಾಷಣದಲ್ಲೇ ರಾಹುಲ್ ಕಿಡಿ

Published

on

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ನೇರವಾಗಿ ಆಡಳಿತ ರೂಢ ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ದೇಶದ ಹಳೆಯ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಕಾಂಗ್ರೆಸ್ ನ 19 ವರ್ಷಗಳ ಕಾಲ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿ ಕೆಳಗಿಳಿದರು.

ಪಕ್ಷದ ನೂತನ ಅಧ್ಯಕ್ಷರಾದ ಬಳಿಕ ಮಾತನಾಡಿದ ರಾಹುಲ್ ಗಾಂಧಿ ತಮ್ಮ ಮೊದಲ ಭಾಷಣದಲ್ಲೇ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ದೇಶವನ್ನು 21 ಶತಮಾನಕ್ಕೆ ತಂದು ನಿಲ್ಲಿಸಿದೆ. ಆದರೆ ಮೋದಿ ಅವರ ಆಡಳಿತದಲ್ಲಿ ಭಾರತ ಮಧ್ಯಕಾಲೀನ ಕಾಲಕ್ಕೆ ಸಾಗಿದೆ ಎಂದು ಕಿಡಿಕಾರಿದರು.

ಭಾಷಣದ ವೇಳೆ ತಮ್ಮನ್ನು ತಾವು ಆದರ್ಶವಾದಿ ಎಂದು ಕರೆದುಕೊಂಡ ರಾಹುಲ್ ಗಾಂಧಿ, ದೇಶದ ಜನರನ್ನು ಒಡೆದು ಮೋದಿ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿ ಹರಡುತ್ತಿರುವ ದ್ವೇಷವನ್ನು ಕಾಂಗ್ರೆಸ್ ಪ್ರೀತಿಯ ಮೂಲಕ ಗೆಲ್ಲಲಿದೆ. ರಾಜಕೀಯ ಎನ್ನುವುದು ಜನರಿಗಾಗಿ. ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ರಾಜಕಾರಣ ಮತ್ತು ರಾಜಕೀಯ ಅರ್ಥ ಬದಲಾಗಿದೆ. ನಾವು ಬಿಜೆಪಿಯನ್ನು ಸಹೋದರ ಪಕ್ಷ ಎಂದು ಪರಿಗಣಿಸುತ್ತೇವೆ. ಆದರೆ ಅವರ ರಾಜಕೀಯ ಹಾಗೂ ಕಾರ್ಯಶೈಲಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.

ಇದಕ್ಕೂ ಮುನ್ನ ಮತನಾಡಿದ ಸೋನಿಯ ಗಾಂಧಿ, ನಾನು 20 ವರ್ಷಗಳ ಹಿಂದೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಭಯಗೊಂಡಿದೆ. ನನ್ನ ಕೈಗಳು ಆಲುಗಾಡುತ್ತಿತ್ತು. ಯಾವುದೇ ರಾಜಕೀಯ ಅನುಭವವಿರಲಿಲ್ಲ. ಆದರೆ ತಮ್ಮ ಮಗ ರಾಹುಲ್ ಗಾಂಧಿಗೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವಿದೆ. ಏಕೆಂದರೆ ಆತನ ವಯಕ್ತಿಕ ಜೀವನದ ಮೇಲೆ ಇದುವರೆಗೂ ಆದ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ, ಇವು ಆತನನ್ನು ಮತ್ತಷ್ಟು ಬಲವಾಗಿಸಿದೆ ಎಂದು ಭಾವುಕರಾದರು.

ಇನ್ನು ಪಕ್ಷದ ಅಧ್ಯಕ್ಷ ಸ್ಥಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು, ಸಂಸದರು, ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಹಲವು ಮುಖಂಡು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *