ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್‌

Public TV
2 Min Read
bjp workers 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಂಜಾಬ್‌ಗೆ ತೆರಳಿದ್ದ ಸಂದರ್ಭದಲ್ಲಿ ಉಂಟಾದ ಭದ್ರತಾ ಲೋಪವನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದು ಹರಿದಾಡುತ್ತಿದ್ದು, ಇದು ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.

NARENDRA MODI SECURITY LAPS

ಫಿರೋಜ್‌ಪುರ ಬಳಿ ಪ್ರಧಾನಿ ಮೋದಿ ಅವರ ಕಾರು ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದುಕೊಂಡು, ʼಬಿಜೆಪಿ ಜಿಂದಾಬಾದ್‌ʼ ಎಂದು ಕೂಗುತ್ತಾ ಹಾರಿನ ಹತ್ತಿರಕ್ಕೆ ಹೋಗುತ್ತಿರುವ ದೃಶ್ಯಾವಳಿ ವೀಡಿಯೋದಲ್ಲಿ ಇದೆ. ಪ್ರಧಾನಿಗಳ ಕಾರಿಗೆ ಅನತಿ ದೂರದಲ್ಲೇ ಕಾರ್ಯಕರ್ತರು ನಿಂತು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ, ನಾಳೆ ಮಹತ್ವದ ವಿಚಾರಣೆ

NARENDRA MODI CAR PUNJAB

ಈ ವೇಳೆ ಪ್ರಧಾನಿಯಿದ್ದ ಕಾರು ಮುಂದೆ ಸಾಗುತ್ತದೆ. ವಿಶೇಷ ರಕ್ಷಣಾ ದಳದ ಸಿಬ್ಬಂದಿ ಈ ವೇಳೆ ಪ್ರಧಾನಿ ಕಾರಿಗೆ ಅಲರ್ಟ್‌ ಆಗಿ ಭದ್ರತೆ ಒದಗಿಸಿತ್ತು. ಈ ಜಾಗದಲ್ಲಿ ಬಿಜೆಪಿ ಕಾರ್ಯಕರ್ತರು ಸಹ ರ‍್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದರು. ಟ್ರಾಫಿಕ್‌ ಆಗಿದ್ದ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಕಂಡುಬಂದಿದ್ದಾರೆ. ಆ ಕಾರು ಪ್ರಧಾನಿಗಳದ್ದು ಎಂಬುದನ್ನು ತಿಳಿದ ಅವರು ಕಾರಿನ ಬಳಿ ಹೋಗಲು ಪ್ರಯತ್ನಿಸಿದ್ದಾರೆ. ಭದ್ರತಾ ಲೋಪಕ್ಕೆ ಇದು ಒಂದು ಕಾರಣ ಎನ್ನಲಾಗುತ್ತಿದೆ.

NARENDRA MODI CAR

ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಕೇಂದ್ರದ ಆಡಳಿತ ಪಕ್ಷ ಬಿಜೆಪಿ ಹಾಗೂ ಪಂಜಾಬ್‌ನ ಆಡಳಿತ ಪಕ್ಷ ಕಾಂಗ್ರೆಸ್‌ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭದ್ರತಾ ಲೋಪ ತನಿಖೆಗಾಗಿ ಮೂರು ಸದಸ್ಯರನ್ನೊಳಗೊಂಡ ತಂಡವನ್ನು ಕೇಂದ್ರ ಸರ್ಕಾರ ಹಾಗೂ ಇಬ್ಬರು ಸದಸ್ಯರನ್ನೊಳಗೊಂಡ ತಂಡವನ್ನು ಪಂಜಾಬ್‌ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ರಚಿಸಿವೆ. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

ಭದ್ರತಾ ಲೋಪಕ್ಕೆ ಪಂಜಾಬ್‌ ಸರ್ಕಾರ ಹಾಗೂ ಪೊಲೀಸರೇ ಕಾರಣ ಎಂದು ಕೇಂದ್ರ ಸರ್ಕಾರ ಗಂಭೀರ ಆರೋಪ ಮಾಡಿದೆ. ಪ್ರಧಾನಿಗಳ ರಸ್ತೆ ಮಾರ್ಗ ಪ್ರಯಾಣವನ್ನು ಕೊನೆ ಕ್ಷಣದಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರದ ಆರೋಪವನ್ನು ಪಂಜಾಬ್‌ ಸರ್ಕಾರ ತಳ್ಳಿಹಾಕಿದೆ.

Share This Article