Connect with us

Bengaluru City

ಅಂದಿನ ಸಿಎಂ ಜನ್ರ ಮುಂದೆ ಬಂದು ಕಣ್ಣೀರು ಹಾಕ್ತಿದ್ರು: ಪ್ರಧಾನಿ ಮೋದಿ

Published

on

– ಸಿಎಂ ಬಿಎಸ್‍ವೈಗೆ ಮೋದಿ ವಿಶ್

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, 12 ಕ್ಷೇತ್ರಗಳು ಕಮಲದ ಪಾಲಾಗಿದೆ. ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಜಯದ ಕುರಿತು ಜಾರ್ಖಂಡ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಒಂದೂವರೆ ವರ್ಷದ ಆಡಳಿತ ನೋಡಿದ್ದರು. ಹಾಗಾಗಿ ಇಂದು ಜನತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಉತ್ತರ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ರಾತ್ರೊರಾತ್ರಿ ಸರ್ಕಾರ ರಚನೆ ಮಾಡಿ ಕುರ್ಚಿಯ ಮೇಲೆ ಕೂತಿದ್ದರು. ಜನಾದೇಶದ ವಿರುದ್ಧ ಕೆಲಸ ಮಾಡಿದವರಿಗೆ ಜನರು ತಮಗೆ ಸಿಕ್ಕ ಮೊದಲ ಅವಕಾಶದಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ತನ್ನ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಒಬ್ಬರನ್ನು ಮಾಡಿ ಒತ್ತಡ ಹಾಕಲು ಆರಂಭಿಸಿತು. ಕಾಂಗ್ರೆಸ್ ಕೈಗೊಂಬೆಯಾಗಿದ್ದ ಅಂದಿನ ಮುಖ್ಯಮಂತ್ರಿಯನ್ನು ಕಿಡ್ನಾಪ್ ಮಾಡಿತ್ತು. ಮುಖ್ಯಮಂತ್ರಿಯನ್ನ ಅಪಹರಿಸಿದ್ದ ಕಾಂಗ್ರೆಸ್, ದೆಹಲಿಗಾಗಿ ಆ ಕೆಲಸ ಮಾಡಿಕೊಡಿ, ಇದು ಮಾಡಬೇಕೆಂದು ಷರತ್ತುಗಳ ಜೊತೆ ಒತ್ತಡ ಹಾಕುತ್ತಿತ್ತು. ಇದೆಲ್ಲದರಿಂದ ನೊಂದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಜನರ ಮುಂದೆ ಬಂದು ಕಣ್ಣೀರು ಹಾಕುತ್ತಿದ್ದರು ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಇತರರೊಂದಿಗೆ ತೆರೆಮರೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಈ ರೀತಿಯ ಅನೈತಿಕ ಮೈತ್ರಿಗಳು ನಮಗೆ ಬೇಡವೆಂದು ಕರ್ನಾಟಕ ಜನತೆ ಉತ್ತರ ನೀಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಜಾರ್ಖಂಡ್ ನಲ್ಲಿಯೂ ಸುಭದ್ರ ಸರ್ಕಾರಕ್ಕೆ ಕಮಲದ ಗುರುತಿಗೆ ನೀವು ಮತ ನೀಡಬೇಕಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

ಈ ಮಧ್ಯೆ ಬಿಎಸ್‍ವೈಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿಯವರು, ಆರ್ ಯೂ ನೌ ಹ್ಯಾಪಿ (ಈಗ ನಿಮಗೆ ಖುಚಿಯಾಯ್ತಾ) ಎಂದು ಕೇಳಿ ಶುಭಾಶಯಗಳು ಎಂದು ತಿಳಿಸಿದ್ದಾರೆ. ಈ ವೇಳೆ ಸಿಎಂ ಕೂಡ, ನೌ ಐ ಆ್ಯಮ್ ಹ್ಯಾಪಿ (ಈಗ ನನಗೆ ಖುಷಿಯಾಯ್ತು) ಎಂದು ಹೇಳಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೆಡವಲು ಕಾರಣರಾದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಇದರ ಫಲಿತಾಂಶ ಇಂದು ಹೊರ ಬಿದ್ದಿದ್ದು, 12 ಕಡೆಗಳಲ್ಲಿ ಕಮಲ ಅರಳಿದೆ. ಅದರಲ್ಲಿಯೂ ಜೆಡಿಎಸ್ ಭದ್ರ ಕೋಟೆಯಾಗಿದ್ದ ಮಂಡ್ಯದ ಕೆ ಆರ್ ಪೇಟೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿರುವುದು ಅಚ್ಚರಿ ಮೂಡಿಸಿದೆ. ಹುಣಸೂರು ಹಾಗೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಜಯಗಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *