– ನೀರು ಉಪಹಾರ ಸೇವಿಸದೆ ಪಾರ್ಥನೆ
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠಕ್ಕೆ ತೆರಳುತ್ತಿದ್ದ ಜಶೋದಾ ಬೆನ್ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.
ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದರು. ಆದರೆ ಅಶ್ವಥ ಮರದ ಕಟ್ಟೆ ಸಿಗದೇ ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದರು.
ಬೆಂಗಳೂರಿಗೆ ಮಂಗಳವಾರ ಬಂದಿದ್ದ ಜಶೋದಾ ಬೆನ್ ಅವರು ಇಂದು ಬೆಳಗ್ಗೆ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಬೇಕಿತ್ತು. ಆದರೆ ಸ್ವಾಮೀಜಿ ಮಠದಲ್ಲಿರದ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ಬಂದರು. ಇಲ್ಲಿಂದ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ ಬಳಿಕ ಅವರು ಶೃಂಗೇರಿಗೆ ತೆರಳುವರು ಎಂದು ಮೂಲಗಳು ತಿಳಿಸಿವೆ.