ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

Public TV
2 Min Read
AYODHYA 4

– ಪ್ರಧಾನಿ ಮೋದಿ ಸಾರಥ್ಯದಲ್ಲಿ ನೆರವೇರಿದ ಪ್ರಾಣಪ್ರತಿಷ್ಠೆ

ಅಯೋಧ್ಯೆ: ರಾಮಭಕ್ತರ 500 ವರ್ಷಗಳ ತಪಸ್ಸಿಗೆ ವರ ಸಿಕ್ಕಿದೆ. ಆಧುನಿಕ ಶಬರಿಯಂತೆ ಕಾದಿದ್ದ ಕೋಟ್ಯಂತರ ಭಕ್ತರಿಗೆ ಭಗವಾನ್‌ ರಾಮ ಕೊನೆಗೂ ದರ್ಶನ ನೀಡಿದ್ದಾನೆ. ಅಯೋಧ್ಯೆ ಇಂದು (ಸೋಮವಾರ) ಅಕ್ಷರಸಹ ರಘುರಾಮನ ಭಕ್ತಿಯಲ್ಲಿ ಮಿಂದೆದ್ದಿತು. ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ (ಜ.22) ನೆರವೇರಿತು. ಪುಣ್ಯಪುರುಷ ರಾಮನನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು.

RAMA 1

12 ಗಂಟೆ 30 ನಿಮಿಷ 32 ಸೆಕೆಂಡು ಶುಭಘಳಿಗೆಯಲ್ಲಿ ಅಭಿಜಿತ್‌ ಮುಹೂರ್ತದಲ್ಲಿ (ʼಅಭಿಜಿತ್‌ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Pran Prathistha ceremony) ನೆರವೇರಿತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಪ್ರಧಾನಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು. ಈ ಸಂದರ್ಭದಲ್ಲಿ ಶಂಖ, ಜಾಗಟೆಗಳು ಮೊಳಗಿದವು.

ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌ ಹಾಗೂ ಅಯೋಧ್ಯೆಯ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.

ಈ ದಿನಕ್ಕಾಗಿ ಪ್ರಧಾನಿಯವರು ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು. ಈ ನಡುವೆ ಹಲವಾರು ದೇಗುಲಗಳಿಗೆ ತೆರಳಿ ಪೂಜೆಯನ್ನೂ ಸಲ್ಲಿಸಿದ್ದರು. ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವಾರು ಗಣ್ಯರು ಸಾವಿರಾರು ಸಂಖ್ಯೆಯಲ್ಲಿ ಈ ಕ್ಷಣಕ್ಕೆ ಸಾಕ್ಷಿಯಾದರು. ಒಟ್ಟಿನಲ್ಲಿ ಇಂದು ಎಲ್ಲೆಲ್ಲೂ ಜೈ ಶ್ರೀ ರಾಮ್ ಘೋಷಣೆ ಮೊಳಗುತ್ತಿದೆ. ಎಲ್ಲಾ ಕಡೆಯೂ ಶ್ರೀರಾಮನ ಗುಣಗಾನ ನಡೆಯುತ್ತಿದೆ.

AYODHYA RAM MANDIR.1png

ಏನಿದು ಪ್ರಾಣ ಪ್ರತಿಷ್ಠೆ?: ಪ್ರಾಣ ಪ್ರತಿಷ್ಠೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದ ಪ್ರಮುಖ ಆಚರಣೆಯಾಗಿದೆ. ವಿಗ್ರಹವು ಕೇವಲ ದೇವರ ರೂಪವನ್ನು ಚಿತ್ರಿಸುವ ಒಂದು ಕಲಾಕೃತಿಯಷ್ಟೆ. ಪ್ರಾಣ ಪ್ರತಿಷ್ಠೆಯ ನಂತರವೇ ವಿಗ್ರಹವು ದೈವಿಕವಾಗುತ್ತದೆ. ಅದಕ್ಕಾಗಿ ವಿಗ್ರಹವನ್ನು ಪವಿತ್ರಗೊಳಿಸಿ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಪ್ರಾಣ ಎಂದರೆ ‘ಜೀವಶಕ್ತಿ, ಉಸಿರು, ಚೈತನ್ಯ’ ಮತ್ತು ಪ್ರತಿಷ್ಠೆ ಎಂದರೆ ‘ಸ್ಥಾಪನೆ’. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪೂಜಾ ವಿಧಾನ, ವೈದಿಕ ಸ್ತೋತ್ರಗಳ ಪಠಣ ನಡೆಸಲಾಗುವುದು. ಪ್ರಾಣ ಪ್ರತಿಷ್ಠೆ ಎಂದರೆ, ವಿಗ್ರಹಕ್ಕೆ ಜೀವಶಕ್ತಿ ತುಂಬಿ ದೈವಿಕವಾಗಿಸುವ ಆಚರಣೆ ಎನ್ನುತ್ತಾರೆ ಹಿರಿಯರು.

ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗೂ ಮೊದಲು ವಿಗ್ರಹದಲ್ಲಿ ದೈವಿಕ ಶಕ್ತಿ ಇರುವುದಿಲ್ಲ. ಪ್ರಾಣ ಪ್ರತಿಷ್ಠೆ ನಂತರವೇ ವಿಗ್ರಹಕ್ಕೆ ವಿಶೇಷ ಶಕ್ತಿ ಬರುತ್ತದೆ. ಬಳಿಕ ವಿಗ್ರಹವು ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಆಗ ದೇವಾಲಯಗಳಲ್ಲಿ ಭಕ್ತರು ವಿಗ್ರಹವನ್ನು ಪೂಜಿಸಬಹುದು ಎಂಬ ನಂಬಿಕೆಯಿದೆ.

Share This Article