ಪಣಜಿ: ದಕ್ಷಿಣ ಗೋವಾದ (Goa) ಪರ್ತಗಾಳಿಯಲ್ಲಿ ಎಂಬಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು (Sri Rama Bronze Statue) ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಾರ್ಪಣೆ ಮಾಡಿದ್ದಾರೆ.
ದಕ್ಷಿಣ ಅಯೋಧ್ಯೆಯಾಗಿ ರೂಪುಗೊಳ್ಳುತ್ತಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿ ಪ್ರಧಾನಿ ಮೋದಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು.
ಗುಜರಾತ್‌ನಲ್ಲಿ ಸರ್ದಾರ್ ಪಟೇಲ್‌ರ ಏಕತಾ ಪ್ರತಿಮೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಬಳಿಯ ಕೆಂಪೇಗೌಡರ ಪ್ರತಿಮೆ ವಿನ್ಯಾಸಗೊಳಿಸಿದ ಪ್ರಖ್ಯಾತ ಶಿಲ್ಪಿ `ಪದ್ಮಭೂಷಣ ಪುರಸ್ಕೃತ ರಾಮ ಸುತಾರ್ ಅವರೇ ಈ ಶ್ರೀರಾಮನ ಮೂರ್ತಿಯನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಆಂದೋಲನದಲ್ಲಿ ಉಡುಪಿ ಜನರ ಪಾತ್ರ ದೇಶಕ್ಕೇ ಗೊತ್ತಿದೆ: ನರೇಂದ್ರ ಮೋದಿ
ಶ್ರೀಮಠಕ್ಕೆ 550 ಸಂವತ್ಸರಗಳು ತುಂಬಿದ ಹಿನ್ನೆಲೆ ಆಯೋಜನೆಗೊಂಡಿರುವ `ಸಾರ್ಧ ಪಂಚ ಶತಮಾನೋತ್ಸವ’ ಕಾರ್ಯಕ್ರಮದ ನಿಮಿತ್ತ ಪ್ರಧಾನಿಯವರು ವಿಶೇಷ ಅಂಚೆ ಚೀಟಿ ಹಾಗೂ ನಾಣ್ಯವನ್ನು ಬಿಡುಗಡೆಗೊಳಿಸಿದರು. ಇದೇ ವೇಳೆ ಶ್ರೀರಾಮನ ಮೂರ್ತಿ ಸುತ್ತಲೂ ರಾಮಾಯಣ ಥೀಮ್ ಪಾರ್ಕ್, ಶ್ರೀರಾಮನ ಮಹಿಮೆ ಸಾರುವ ಮ್ಯೂಸಿಯಂ ಹಾಗೂ 7ಡಿ ರಂಗಮಂದಿರಕ್ಕೂ ಚಾಲನೆ ನೀಡಿದರು.
ಶ್ರೀಮಠಕ್ಕೆ 550 ಸಂವತ್ಸರ ತುಂಬಿದ ಹಿನ್ನೆಲೆ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದರು, ದೇಶದ 120 ಕೇಂದ್ರಗಳಲ್ಲಿ 550 ಕೋಟಿ ಶ್ರೀರಾಮ ನಾಮ ಜಪ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆದರೆ 590 ಕೋಟಿಗೂ ಹೆಚ್ಚು ಶ್ರೀರಾಮ ನಾಮ ಜಪ ನಡೆದು ದಾಖಲೆ ಸೃಷ್ಟಿಸಿದೆ. ಈ ನಿಮಿತ್ತ ಶ್ರೀಕ್ಷೇತ್ರ ಬದರಿಯಿಂದ ಹೊರಟು 40 ದಿನಗಳ ಕಾಲ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಿದ `ಶ್ರೀರಾಮ ದಿಗ್ವಿಜಯ ರಥಯಾತ್ರೆ’ಯೂ ಪರ್ತಗಾಳಿ ಮಠವನ್ನು ತಲುಪಿದೆ. ಈಗ ಹನ್ನೊಂದು ದಿನಗಳ ಕಾಲ ನಡೆಯುತ್ತಿರುವ ಸಾರ್ಧ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲೂ ಪ್ರತಿದಿನ 55ರಂತೆ ಒಟ್ಟು 550 ಹೋಮ-ಹವನಗಳು ನಡೆಯುತ್ತಿವೆ.


