ಕರಾವಳಿ ಮಳೆ – ಅಧಿಕಾರಿಗಳ ಜೊತೆ ಮಾತನಾಡಿದ ಮೋದಿ

Public TV
1 Min Read
modi rain tweet

ಬೆಂಗಳೂರು: ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕರಾವಳಿ, ಉಡುಪಿ, ಮಂಗಳೂರು ಸೇರಿದಂತೆ ಕರ್ನಾಟಕದ ಇತರೇ ಭಾಗಗಳ ಜನರ ರಕ್ಷಣೆಗೆ ಅಗತ್ಯ ಸಹಕಾರ ನೀಡಲು ಸೂಚಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಕ್ಷಣೆಗೆ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದು, ಅಪಾಯಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸಹಕಾರ ನೀಡಲು ಅಧಿಕಾರಿಗಳ ಬಳಿ ಮಾತನಾಡಿ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಏಷ್ಯಾ ರಾಷ್ಟ್ರಗಳ ವಿದೇಶಿ ಪ್ರವಾಸದಲ್ಲಿದ್ದು, ಇಂಡೋನೇಷಿಯಾ, ಸಿಂಗಾಪುರ, ಮಲೇಷಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಪ್ರವಾಸದ ಭಾಗವಾಗಿ ಇಂದು ಇಂಡೋನೇಷಿಯಾ ಗೆ ಭೇಟಿ ನೀಡಿದ್ದು, ಬಳಿಕ ಸಿಂಗಾಪುರ ಹಾಗೂ ಮಲೇಷಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಮುಕುನು ಚಂಡಮಾರುತದ ಪ್ರಭಾವಕ್ಕೆ ಕರಾವಳಿಯ ಮೂರು ಜಿಲ್ಲೆಗಳು ತತ್ತರಿಸಿ ಹೋಗಿದ್ದು, ಮಂಗಳೂರಿನ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿ ಪ್ರವಾಹ ಭೀತಿ ಎದುರಾಗಿದೆ. ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ, ಮಂಗಳೂರು – ಕೇರಳ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಉಡುಪಿ ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದು, ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ 34 ವರ್ಷದ ಶೀಲಾ ಎಂಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ 2 ಬೋಟ್ ಗಳಲ್ಲಿ ಒಂದು ಮುಳುಗಿದ್ದು, ಮುಳುಗುವ ಹಂತದಲ್ಲಿದ್ದ ಮತ್ತೊಂದು ಬೋಟ್ ಮತ್ತು ನಾಲ್ವರು ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.

https://www.youtube.com/watch?v=-TAoAb4cibM

Share This Article