ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಳಗಾವಿ ನಗರದಲ್ಲಿ (Belagavi City) ಭರ್ಜರಿ 10.7 ಕಿ.ಮೀ ರೋಡ್ ಶೋ (Road Show) ಮಾಡುವ ಮೂಲಕ ಮತಬೇಟೆ ನಡೆಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನಡೆಸಿದ ಮೋದಿ ಮಧ್ಯಾಹ್ನ 2:35ರ ವೇಳೆಗೆ ಬೆಳಗಾವಿ ಪಿಟಿಎಸ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನಂತರ ಮೋದಿ ಕಾರನ್ನು ಏರಿದರು. ಕಾರಿನಲ್ಲಿ ನಿಂತಿದ್ದ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸುವ ಮೂಲಕ ಭವ್ಯವಾದ ಸ್ವಾಗತ ನೀಡಲಾಯಿತು.
ಚನ್ನಮ್ಮ ವೃತ್ತದಿಂದ ಆರಂಭಗೊಂಡಿದ್ದ ರೋಡ್‌ಶೋದಲ್ಲಿ ಮುಖ್ಯ ವೇದಿಕೆವರೆಗಿನ ಪ್ರಮುಖ ಎಂಟು ಸ್ಥಳಗಳಲ್ಲಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ವಿವಿಧ ಸಮುದಾಯಗಳ ಜನರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಧರ್ಮವೀರ ಸಂಭಾಜಿ ವೃತ್ತ ಮತ್ತು ರಾಮಲಿಂಗ್ ಖಿಂಡ್ ಗಲ್ಲಿಯ ಅಶೋಕವೃತ್ತ, ಟಿಳಕ್ ವೃತ್ತಗಳಲ್ಲಿ ಮೋದಿ ರೋಡ್ ಶೋಗೆ ಹೂಮಳೆಯ ಸ್ವಾಗತ ನೀಡಲಾಯಿತು. ಮೋದಿ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಲಾಗಿತ್ತು. ನಗರ ಕೇಸರಿ ಮಯವಾಗಿದ್ದರೆ, ಅಭಿಮಾನಿಗಳು ಕೇಸರಿ ಶಾಲು ಧರಿಸಿದ್ದರು. ಇದನ್ನೂ ಓದಿ: ಯಡಿಯೂರಪ್ಪರ ಭಾಷಣ, ಜೀವನ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ
ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ಮೋದಿ ಅವರಿಗೆ ಜಯಘೋಷ ಹಾಕುತ್ತಿದ್ದರು. ಎರಡೂ ಬದಿಯ ಕಟ್ಟಡದ ಮೇಲೆ ಜನರು ನಿಂತು ಮೋದಿಗೆ ಜೈಕಾರ ಹಾಕುತ್ತಿದ್ದರು. ಹೂಮಳೆ ಎಷ್ಟು ಬಿದ್ದಿತ್ತು ಅಂದರೆ ಕಾರಿನ ಮೇಲಿನ ಭಾಗ (ಟಾಪ್) ಮತ್ತು ಮುಂಭಾಗದ ಬಾನೆಟ್ ಪೂರ್ತಿ ಹೂ ಬಿದ್ದಿತ್ತು. ಹೆಣ್ಣಮಕ್ಕಳು ಕೇಸರಿ ಪೇಟಾ ಧರಿಸಿ ಪೂರ್ಣ ಕುಂಭ ಸ್ವಾಗತಿಸಿದರು. ಅಭಿಮಾನಿಗಳ ಉತ್ಸಾಹದಲ್ಲಿದ್ದರೆ ಮೋದಿ ಅಷ್ಟೇ ಉತ್ಸಾಹದಿಂದ ಅಭಿಮಾನಿಗಳಿಗೆ ನಗುಮುಖದಿಂದಲೇ ಕೈ ಬೀಸುತ್ತಿದ್ದರು. ಮೋದಿ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ನಗರ ಪೂರ್ತಿ ಕೇಸರಿ ಮಯವಾಗಿತ್ತು. ಬಿಜೆಪಿ ಧ್ವಜಗಳನ್ನು ಅಭಿಮಾನಿಗಳು ಕೈಯಲ್ಲಿ ಹಿಡಿದಿದ್ದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತು ಬಿಡುಗಡೆ, ಮೇಲ್ದರ್ಜೆಗೇರಿದ ಬೆಳಗಾವಿ ರೈಲ್ವೇ ನಿಲ್ದಾಣ ಉದ್ಘಾಟನೆ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆಯನ್ನು ಮೋದಿ ಮಾಡಲಿದ್ದಾರೆ.
ಸಾಧಾರಣವಾಗಿ ಬಿಜೆಪಿ ಪಕ್ಷದ ಕಾರ್ಯಕ್ರಮ, ಚುನಾವಣೆಯ ಸಮಯದಲ್ಲಿ ಮೋದಿ ರೋಡ್ ಶೋ ಮಾಡುವುದು ಸಾಮಾನ್ಯ. ಗುಜರಾತ್ ಚುನಾವಣೆಯಲ್ಲಿ ನಡೆಸಿದ ರೋಡ್ ಶೋ ಬಿಜೆಪಿಗೆ ನೆರವಾಗಿತ್ತು. ಅದೇ ತಂತ್ರವನ್ನು ಬಿಜೆಪಿ ಈಗ ಕರ್ನಾಟಕ ಚುನಾವಣೆಯಲ್ಲಿ ಮಾಡುತ್ತಿದೆ.