ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ: ಯುದ್ಧ ಕುರಿತು ಪುಟಿನ್‌ ಜೊತೆ ಮೋದಿ ಮಾತು

Public TV
1 Min Read
narendra modi vladimir putin

– ಬ್ರಿಕ್ಸ್‌ ಶೃಂಗಸಭೆ ಹಿನ್ನೆಲೆ ಮೋದಿ-ಪುಟಿನ್‌ ಭೇಟಿ

ಮಾಸ್ಕೋ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ ಎಂದು ಉಕ್ರೇನ್‌ ಮೇಲಿನ ರಷ್ಯಾ ಯುದ್ಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜೊತೆ ಮಾತುಕತೆ ನಡೆಸಿದರು.

ಮಂಗಳವಾರ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಪುಟಿನ್ ಅವರನ್ನು ಭೇಟಿಯಾದರು. ಉಭಯ ನಾಯಕರು ಪರಸ್ಪರ ಆಲಿಂಗಿಸಿಕೊಂಡರು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಒಳಗೊಂಡಿರುವ ದೇಶಗಳ ಅನೌಪಚಾರಿಕ ಗುಂಪಿನ ಶೃಂಗಸಭೆಯು ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿದೆ.

ಬ್ರಿಕ್ಸ್ ಗುಂಪಿನ ಯಶಸ್ಸನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಅನೇಕ ಇತರ ರಾಷ್ಟ್ರಗಳು ಅದರಲ್ಲಿ ಸೇರಲು ಬಯಸುತ್ತವೆ ಎಂದು ಇದೇ ವೇಳೆ ತಿಳಿಸಿದರು.

ನಾವು ರಷ್ಯಾ-ಉಕ್ರೇನ್ ಸಮಸ್ಯೆ ವಿಚಾರವಾಗಿ ಎಲ್ಲಾ ಕಡೆ ಸಂಪರ್ಕದಲ್ಲಿದ್ದೇವೆ. ಎಲ್ಲಾ ಸಂಘರ್ಷಗಳನ್ನು ಮಾತುಕತೆಯಿಂದ ಪರಿಹರಿಸಬಹುದು ಎಂಬುದು ನಮ್ಮ ನಿಲುವು. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳು ಇರಬೇಕು ಎಂದು ನಾವು ನಂಬುತ್ತೇವೆ. ಶಾಂತಿಯನ್ನು ತರುವುದಕ್ಕೆ ಸಹಾಯ ಮಾಡಲು ಭಾರತ ಯಾವಾಗಲೂ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅವರ ಎರಡನೇ ರಷ್ಯಾ ಭೇಟಿಯಾಗಿದೆ. ಅವರು 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜುಲೈನಲ್ಲಿ ಮಾಸ್ಕೋಗೆ ಹೋಗಿದ್ದರು. ಅಲ್ಲಿ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು. ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ಅನ್ನು ಮೋದಿ ಪಡೆದಿದ್ದರು.

Share This Article