ದೇಶದಲ್ಲೇ ನಿರ್ಮಾಣವಾಗಲಿದೆ ಸರಕು ಸಾಗಣೆ ವಿಮಾನ – ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಲೋಕಾರ್ಪಣೆ

Public TV
3 Min Read
PM Narendra Modi Launches C 295 Aircraft Facility In Gujarat Tata Airbus C295 Complex 3

– ಸ್ಪೇನ್‌ ಪ್ರಧಾನಿ ಜೊತೆ ವಡೋದರದಲ್ಲಿ ಮೋದಿಯಿಂದ ಉದ್ಘಾಟನೆ
– 2012 ರಲ್ಲಿ ವಿಮಾನ ನಿರ್ಮಾಣದ ಕನಸು ಕಂಡಿದ್ದ ರತನ್‌ ಟಾಟಾ

ವಡೋದರ: ಇನ್ನು ಮುಂದೆ ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ-295 (C-295) ಅತ್ಯಾಧುನಿಕ ವಿಮಾನಗಳು ಮೇಕ್‌ ಇನ್‌ ಇಂಡಿಯಾ (Make In India) ಅಡಿ ದೇಶದಲ್ಲೇ ತಯಾರಾಗಲಿದೆ.

ಸೋಮವಾರ ಗುಜರಾತ್‌ನ ವಡೋದರಾದಲ್ಲಿ (Gujarat’s Vadodara) ಸಿ-295 ಅತ್ಯಾಧುನಿಕ ವಿಮಾನಗಳನ್ನು ತಯಾರಿಸಲಿರುವ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ (Tata-Airbus C295 Complex) ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಜ್ (Pedro Sanchez) ಜಂಟಿಯಾಗಿ ಲೋಕಾರ್ಪಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ, ಟಾಟಾ-ಏರ್‌ಬಸ್ ಉತ್ಪಾದನಾ ಸೌಲಭ್ಯವು ಭಾರತ-ಸ್ಪೇನ್ ಸಂಬಂಧಗಳನ್ನು ಮತ್ತು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ವಿಷನ್ ಅನ್ನು ಬಲಪಡಿಸುತ್ತದೆ. ವಡೋದರಾ ಸೌಲಭ್ಯದಲ್ಲಿ ತಯಾರಾದ ವಿಮಾನಗಳನ್ನು ಭವಿಷ್ಯದಲ್ಲಿ ರಫ್ತು ಮಾಡಲಾಗುವುದು ಎಂದು ತಿಳಿಸಿದರು.

PM Narendra Modi Launches C 295 Aircraft Facility In Gujarat Tata Airbus C295 Complex 1

ಈ ಸಂದರ್ಭದಲ್ಲಿ ರತನ್‌ ಟಾಟಾ ಅವರನ್ನು ಸ್ಮರಿಸಿದ ಮೋದಿ, ನಾನು ಟಾಟಾ ಮತ್ತು ಏರ್‌ಬಸ್ ತಂಡಗಳನ್ನು ಅಭಿನಂದಿಸುತ್ತೇನೆ. ಕೆಲ ದಿನಗಳ ಹಿಂದೆ ನಮ್ಮ ದೇಶ ರತನ್‌ ಟಾಟಾ ಅವರನ್ನು ಕಳೆದುಕೊಂಡಿದೆ. ಇಂದು ಟಾಟಾ ನಮ್ಮೊಂದಿಗೆ ಇದ್ದಿದ್ದರೆ ಅವರು ತುಂಬಾ ಸಂತೋಷವಾಗಿರುತ್ತಿದ್ದರು. ಎಲ್ಲಿಯೇ ಇದ್ದರೂ ಅವರ ಆತ್ಮ ಸಂತೋಷವಾಗಿರುತ್ತದೆ. ಈ ಕಾರ್ಖಾನೆಯು ನವ ಭಾರತದ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಲೋಕಾರ್ಪಣೆ ಕಾರ್ಯಕ್ರಮ ನಡೆಯುವ ಮೊದಲು ಪೆಡ್ರೊ ಸ್ಯಾಂಚೆಜ್ ಜೊತೆ ಮೋದಿ ವಡೋದರದಲ್ಲಿ ರೋಡ್‌ ಶೋ ನಡೆಸಿದರು. 18 ವರ್ಷದ ನಂತರ ಸ್ಪೇನ್‌ ಪ್ರಧಾನಿ ಭಾರತಕ್ಕೆ ಬಂದಿರುವುದು ವಿಶೇಷ.

ವಿಮಾನ ಪ್ರೇಮಿ ಆಗಿದ್ದ ರತನ್‌ ಟಾಟಾ ಅವರು ಈ ಯೋಜನೆ ಕನಸು ಕಂಡಿದ್ದರು. 2012ರಲ್ಲೇ ಟಾಟಾ ಅವರು ಏರ್‌ಬಸ್‌ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದರು. 12 ವರ್ಷದ ಬಳಿಕ ರತನ್‌ ಟಾಟಾ ಅವರ ಕನಸು ಈಗ ನನಸಾಗಿದೆ. ಅಕ್ಟೋಬರ್ 2022 ರಲ್ಲಿ ಈ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದನ್ನೂ ಓದಿ: ಸರ್ಕಾರದ ಮುಖ್ಯಸ್ಥರ ಭೇಟಿಯಾದ್ರೆ ಡೀಲ್ ಎಂದರ್ಥವಲ್ಲ: ಮೋದಿ ಭೇಟಿ ಬಗ್ಗೆ ಮೌನ ಮುರಿದ ಸಿಜೆಐ

PM Narendra Modi Launches C 295 Aircraft Facility In Gujarat Tata Airbus C295 Complex 2

 

ಏನಿದು ಒಪ್ಪಂದ?
2021 ರಲ್ಲಿ ರಕ್ಷಣಾ ಸಚಿವಾಲಯವು C-295 56 ವಿಮಾನಗಳ ಪೂರೈಕೆಗಾಗಿ ಸ್ಪೇನ್‌ನ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಎಸ್‌ಎ ಜೊತೆ 21,935 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ 16 ವಿಮಾನಗಳು ಸ್ಪೇನ್‌ನಿಂದ ಬರಲಿದ್ದು, ಉಳಿದ 40 ಭಾರತದಲ್ಲಿ ಉತ್ಪಾದನೆಯಾಗಬೇಕು ಎಂದು ಒಪ್ಪಂದದಲ್ಲಿ ಷರತ್ತು ವಿಧಿಸಲಾಗಿತ್ತು.

ಮೊದಲ ವಿಮಾನ 2026ರ ಸೆಪ್ಟೆಂಬರ್‌ನಲ್ಲಿ ನಿರ್ಮಾಣ ಆಗಿ ವಾಯುಪಡೆ ಸೇರ್ಪಡೆಯಾಗಲಿದ್ದು ಉಳಿದ 39 ವಿಮಾನಗಳು 2031ರೊಳಗೆ ನಿರ್ಮಾಣ ಆಗಲಿವೆ. ಈಗಾಗಲೇ ಬರಬೇಕಾಗಿದ್ದ 16 ವಿಮಾನಗಳ ಪೈಕಿ 6 ವಿಮಾನಗಳು ಸ್ಪೇನ್‌ನಿಂದ ಬಂದಿವೆ. 2025ರ ಆಗಸ್ಟ್ ಒಳಗೆ ಉಳಿದ 10 ವಿಮಾನ ಭಾರತಕ್ಕೆ ಆಗಮಿಸಲಿವೆ.

ಹಲವು ವರ್ಷಗಳಿಂದ ಸೇವೆಯಲ್ಲಿರುವ ಹಾಲಿ Avro-748 ವಿಮಾನಗಳ ಬದಲು ಮುಂದಿನ ದಿನಗಳಲ್ಲಿ C-295 ವಿಮಾನಗಳನ್ನು ಬಳಸಲಾಗುತ್ತದೆ. ಸಮಕಾಲೀನ ತಂತ್ರಜ್ಞಾನದೊಂದಿಗೆ ಪ್ರಸ್ತುತ ಭಾರವಾದ ವಿಮಾನಗಳು ತೆರಳಲು ಸಾಧ್ಯವಾಗದ ಸ್ಥಳಗಳಿಗೆ ಲಾಜಿಸ್ಟಿಕ್ ಕಾರ್ಯಾಚರಣೆಗಳಿಗೆ ಈ ವಿಮಾನವನ್ನು ಬಳಸಬಹುದಾಗಿದೆ.

 

ವಿಮಾನ ನಿರಂತರ 11 ಗಂಟೆಗಳವರೆಗೆ ಹಾರಾಡುವ ಸಾಮರ್ಥ್ಯ ಹೊಂದಿದ್ದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಹು-ಪಾತ್ರ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು.

ಒಪ್ಪಂದದ ಅಡಿಯಲ್ಲಿ ಎಲ್ಲಾ 56 ವಿಮಾನಗಳಿಗೆ ಭಾರತೀಯ ಸಾರ್ವಜನಿಕ ವಲಯದ ರಕ್ಷಣಾ ಉದ್ಯಮಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಸ್ಥಳೀಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ ಅನ್ನು ಸಹ ಅಳವಡಿಸಲಾಗಿದೆ.

 

Share This Article