Connect with us

Dakshina Kannada

ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

Published

on

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಮೋದಿ ಉಜಿರೆಯ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 12 ಲಕ್ಷ ಮಹಿಳೆಯರಿಗೆ ರುಪೇ ಕಾರ್ಡ್ ವಿತರಣೆ ಮಾಡಲಾಯಿತು.

ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿರುವ ವೀರೇಂದ್ರ ಹೆಗ್ಗಡೆ ಅವರಿಗೆ ಶಾಲು ಹೊದಿಸಿ ಮೋದಿ ಸನ್ಮಾನಿಸಿದರು. ಸನ್ಮಾನದ ಬಳಿಕ ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಮಹಿಳೆಯರಿಗೆ ನನ್ನ ನಮಸ್ಕಾರಗಳು. ನನ್ನ ಪ್ರೀತಿಯ ಸಹೋದರಿಯರಿಗೆ ನನ್ನ ಧನ್ಯವಾದಗಳು ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಮಾತು ಆರಂಭಿಸಿದರು.

ಇದು ನನ್ನ ಸೌಭಾಗ್ಯ ಭಗವಾನ್ ಮಂಜುನಾಥ್ ಸ್ವಾಮಿಯ ದರ್ಶನದ ಜೊತೆಗೆ ನಿಮ್ಮೆಲ್ಲರ ದರ್ಶನ ಮಾಡುವ ಭಾಗ್ಯ ದೊರೆತಿದೆ. ಕಳೆದ ವಾರ ನಾನು ಕೇದರನಾಥ್ ತೆರಳಿದ್ದೆ, ಇಂದು ದಕ್ಷಿಣ ಭಾರತದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುವುದು ಅತೀವ ಆನಂದವನ್ನು ತರಿಸಿದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೆಗ್ಗಡೆ ಅವರನ್ನು ಸನ್ಮಾನಿಸಲು ನಾನು ತುಂಬಾ ಚಿಕ್ಕವನು. ದೇಶದ ಜನರು ನನ್ನನ್ನು ಒಂದು ಸ್ಥಾನದಲ್ಲಿ ಕೂರಿಸಿದ್ದರಿಂದ ಇಂದು ನಾನು ಹೆಗ್ಗಡೆಯವರನ್ನು ಸನ್ಮಾನಿಸಿದ್ದೇನೆ. ಇದು ನನ್ನ ಸೌಭಾಗ್ಯ ಎಂದು ಹೇಳಿದರು.

ಸಮಾಜದ ರಕ್ಷಣೆ: ಹೆಗ್ಗಡೆ ಅವರನ್ನು ನಾನು ಎಷ್ಟು ಬಾರಿ ನೋಡಿದರೂ ಅವರ ಮುಖದ ಮೇಲಿನ ಮುಗುಳ್ನಗೆ ಎಂದು ಹೋಗಲ್ಲ. ನಾನು ಹೆಗ್ಗಡೆವರಿಂದ ಕಲಿಯುವುದು ತುಂಬಾ ಇದೆ. ಹೆಗ್ಗಡೆ ಅವರು ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಕೌಶಲ್ಯ ತರಬೇತಿ ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾನವ ಸಂಪನ್ಮೂಲದ ಬಳಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ಅವರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ. ದೇಶ ಬದಲಾವಣೆಯತ್ತ ಸಾಗುತ್ತಿದ್ದು, ಇಂದು 12 ಲಕ್ಷ ಮಹಿಳೆಯರು ತಮ್ಮನ್ನು ಮ್ಮ ಹಣಕಾಸಿನ ವ್ಯವಹಾರವನ್ನು ಡಿಜಿಟಲ್ ಕ್ಷೇತ್ರದತ್ತ ಆರಂಭಿಸುತ್ತಿದ್ದಾರೆ. 21 ನೇ ಶತಮಾನ ಕೌಶಲ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ನಮ್ಮ ಹಿರಿಯರು ಪೂರ್ವಜರು ನಮಗೆ ಸಮಾಜ ಬಿಟ್ಟು ಹೋಗಿದ್ದು, ನಾವು ನಮ್ಮ ಮುಂದಿನ ಪೀಳಿಗೆಯವರಿಗೆ ಬಿಟ್ಟು ಕೊಡಬೇಕಾಗಿದೆ. ಪರಿಸರ ಮತ್ತು ಸಮಾಜದ ರಕ್ಷಣೆ ನಮ್ಮ ಮೇಲಿದೆ ಎಂದು ತಿಳಿಸಿದರು.

ಪರ್ ಡ್ರಾಪ್ ಮೋರ್ ಕ್ರಾಪ್: ನಾವು ಎಂದೂ ಭೂಮಿ ತಾಯಿಯ ಬಗ್ಗೆ ಯೋಚನೆ ಮಾಡುವುದಿಲ್ಲ. ನಮಗೆ ನಮ್ಮ ಲಾಭ ಮಾತ್ರ ಮುಖ್ಯವಾಗಿದೆ. ಹಲವು ಕ್ರಿಮಿನಾಶಕಗಳನ್ನು ಬಳಸುತ್ತಿದ್ದೇವೆ. ಕ್ರಿಮಿನಾಶಕಗಳ ಬಳಕೆಯ ಪ್ರಮಾಣ ಕಡಿಮೆಗೊಳಿಸಬೇಕು. 2022ರೊಳಗೆ ಯೂರಿಯಾ ಉಪಯೋಗವನ್ನು ಶೇ.50ರಷ್ಟು ಕಡಿಮೆ ಬಳಕೆ ಮಾಡುತ್ತೇವೆ ಎಂದು ಎಲ್ಲ ಕೃಷಿ ಬಾಂಧವರು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಮೈಕ್ರೋ ಇರಿಗೇಷನ್ `ಪರ್ ಡ್ರಾಪ್ ಮೋರ್ ಕ್ರಾಪ್’ ಎಂಬ ಸಂಕಲ್ಪವನ್ನು ನಮ್ಮ ರೈತ ಬಾಂಧವರು ಮಾಡಬೇಕಾಗಿದೆ ಎಂದ್ರು.

ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇಂದು 12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್ ಗೆ ಪ್ರಯಾಣಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆಗೆ ಪ್ರಯಾಣಿಸಿದ್ದಾರೆ. ಮಧ್ಯಾಹ್ನ 1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

 

Click to comment

Leave a Reply

Your email address will not be published. Required fields are marked *