ಮೈಸೂರು: ಪ್ರಧಾನಿ ನರೇಂದ್ರ ಮೋದಿ ಬಂದಿದ್ದೇ ಇಸ್ರೋಗೆ ಅಪಶಕುನ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಪ್ರಚಾರಕ್ಕಾಗಿ ಚಂದ್ರಯಾನ್-2ನ ವಿಕ್ರಂ ಲ್ಯಾಂಡರ್ ಚಂದ್ರಸ್ಪರ್ಶದ ವೇಳೆ ಇಸ್ರೋ ಕಚೇರಿಗೆ ಬಂದಿದ್ದರು. ಈ ಸಾಧನೆಯನ್ನು ತಾವೇ ಮಾಡಿದ್ದಾಗಿ ಬಿಂಬಿಸುವುದಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಕಾಲಿಟ್ಟಿದ್ದು ಇಸ್ರೋ ವಿಜ್ಞಾನಿಗಳಿಗೆ ಎಲ್ಲೋ ಒಂದು ಕಡೆ ಅಪಶಕುನ ಉಂಟಾಯಿತೋ ಏನೋ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಸರಿಯಾಗಿ ಲ್ಯಾಂಡ್ ಆಗಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಪ್ರವಾಹ ಪರಿಹಾರ ಕಲ್ಪಿಸದ ಪ್ರಧಾನಿ ಮೋದಿ ರಷ್ಯಾಗೆ ಸಾಲ ಕೊಡುತ್ತಾರೆ. ಮೋದಿ ಅವರ ಮುಂದೆ ಮಾತನಾಡುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಹೆದರುತ್ತಾರೆ ಎಂದು ಹೇಳುವಾಗ ಈ ರೀತಿ ವಿವಾದ ಮೇಲೆ ಎಳೆದುಕೊಂಡಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ಅವರಉ ವಸತಿ ಇಲಾಖೆ ಸಚಿವರಾ? ದಸರಾ ಮಾಡುವ ಸಚಿವರಾ? ನೆರೆ ಸಂತ್ರಸ್ತರ ನೆರವಿಗೆ ವಸತಿ ಸಚಿವರು ಹೋಗುತ್ತಿಲ್ಲ. ದಸರಾ ಮಾಡಲು ಒಬ್ಬ ಮಂತ್ರಿ ಇಷ್ಟು ಸಭೆ, ಇಷ್ಟು ಮುತುರ್ಜಿ ವಹಿಸಿರುವುದು ಇದೇ ಮೊದಲು. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಯೋಚಿವುದನ್ನು ಬಿಟ್ಟು ದಸರಾ ದಸರಾ ಅಂತ ಕೂತಿದ್ದಾರೆ. ವಸತಿ ಸಚಿವರು ಖುದ್ದಾಗಿ ದಸರಾ ಸಿದ್ಧತೆ ಮಾಡುವ ಹಾಗೂ ಕೆಲವರಿಗೆ ಹೋಳಿಗೆ ಊಟ ಹಾಕಿಸಿಕೊಂಡು ಸಭೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಇದ್ದಿದ್ದರೆ ಎಲ್ಲಿದಿಯಪ್ಪ ಕುಮಾರ ಅಂತ ಹೇಳುತ್ತಿದ್ದರು. ಆದರೆ ಇವರು ಮಾತ್ರ ಏನೂ ಮಾಡದೆ ಸುಮ್ಮನಿದ್ದಾರೆ. ಬಾದಾಮಿಯಲ್ಲಿ ರಸ್ತೆಯಲ್ಲಿ ಶೆಡ್ ಹಾಕಿದ್ದಾರೆ. ಅದನ್ನ ನಮ್ಮ ಅಭ್ಯರ್ಥಿಯಾಗಿದ್ದವರ ಬಳಿ ವರದಿ ಕೇಳಿದ್ದೇನೆ. ಮಾಜಿ ಸಿದ್ದರಾಮಯ್ಯ ಹಾಗೂ ಸರ್ಕಾರ ಹೋದರೂ ಏನು ಆಗಿಲ್ಲ ಅಂತ ಮಾಧ್ಯಮದಲ್ಲಿ ನೋಡಿದ್ದೇನೆ. ಹಾಗಾಗಿ ಮಾಹಿತಿ ತರಿಸಿಕೊಂಡು ನಾನೇ ಸ್ಥಳಕ್ಕೆ ಹೋಗಬೇಕು ಅಂತ ನಿರ್ಧರಿಸಿದ್ದೇನೆ ಎಂದು ತಿಳಿಸಿದರು.