ನವದೆಹಲಿ: ಕರ್ನಾಟಕ ರಾಜ್ಯದ ಹಿತ ಕಾಪಾಡಲು ಸಿಕ್ಕದ್ದ ಮಹತ್ವದ ಅವಕಾಶವನ್ನ ಬಳಸಿಕೊಳ್ಳದೇ ರಾಜ್ಯದ ಬಿಜೆಪಿ ಸಂಸದರು ತಮ್ಮ ಸ್ವಾರ್ಥ ಮೆರೆದಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿರುವ ಆತ್ಮರಾಮ ನಾಡಕರ್ಣಿ ಅವರಿಗೆ ಮಹದಾಯಿ ವಿಚಾರದಲ್ಲಿ ಗೋವಾ ಪರ ವಾದ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಮೇಲೆ ಕರ್ನಾಟಕದ ವಿರುದ್ಧ ಗೋವಾ ಪರ ವಾದ ಮಾಡಲು ಅವಕಾಶ ನೀಡಿದ್ದು ಸರಿಯೇ ಎಂಬ ಪ್ರಶ್ನೆಯನ್ನ ಸಂಸದರು ಕೇಂದ್ರ ಸರ್ಕಾರದ ಮುಂದೆ ಕೇಳಬೇಕಿತ್ತು. ಆದರೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಂಸದರ ಸಭೆಯಲ್ಲಿ ರಾಜ್ಯದ ಸಂಸದರು ತುಟಿ ಬಿಚ್ಚಿಲ್ಲ.
Advertisement
ಬದಲಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನ ರಾಜ್ಯದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಮೋದಿ ಅವರ ಕಟ್ಟಪ್ಪಣೆಗೆ ತಲೆ ಅಲ್ಲಾಡಿಸಿ ಬಂದಿದ್ದಾರೆ. ಆದ್ರೆ ಮೋದಿ ಅವರು ಕರೆದ ಸಂಸದರ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ. ರಾಜ್ಯದ ಸಂಸದರು ಮೋದಿ ಅವರನ್ನ ಕೇಳುವ ಧೈರ್ಯ ಕೂಡಾ ಪ್ರದರ್ಶಿಸಿಲ್ಲ ಎನ್ನಲಾಗಿದೆ.
Advertisement
ಗೋವಾ ಚುನಾವಣೆ ಬಳಿಕ ಮಹದಾಯಿ ಸಮಸ್ಯೆ ಬಗೆಹರಿಸುವ ನಿಶಾನೆ ತೋರಿದ್ದ ಪ್ರಧಾನಿ ಮೋದಿ ಅವರು ಗೋವಾ ಚುನಾವಣೆ ಮುಗಿದು, ಅಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ರೂ, ಮಹದಾಯಿ ವಿಚಾರದಲ್ಲಿ ಮಾತ್ರ ಮತ್ತೆ ಮೌನವಾಗಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಎದ್ದಿದೆ.
Advertisement
ಪ್ರಶ್ನೆ ಯಾಕೆ ಮಾಡಬೇಕಿತ್ತು?
ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಆಯ್ಕೆಯಾಗುವ ವಕೀಲರು ಖಾಸಗಿ ಮೊಕದ್ದಮೆಗಳ ವಕೀಲಿ ಕೈಗೊಳ್ಳುವಂತಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯ ಮೊಕದ್ದಮೆಗಳ ವಿನಾ ರಾಜ್ಯ ಸರ್ಕಾರಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪರ ವಕಾಲತ್ತು ಮಾಡಲು ಕೇಂದ್ರ ಅನುಮತಿ ಪಡೆಯಬೇಕು. ಹೀಗಿರುವ ಎರಡೂ ರಾಜ್ಯಗಳ ನಡುವೆ ತಟಸ್ಥ ಧೋರಣೆ ಅನುಸರಿಸಬೇಕಾದ ಕೇಂದ್ರ ಸರ್ಕಾರ ಆತ್ಮರಾಮ ನಾಡಕರ್ಣಿ ಅವರಿಗೆ ಗೋವಾದ ಪರ ವಾದ ಮಾಡಲು ಅನುಮತಿ ನೀಡಿದ್ದು ಸರಿಯೇ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಸಂಸದರು ಪ್ರಶ್ನೆ ಮಾಡಬೇಕಿತ್ತು.
Advertisement
ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕಗೊಳ್ಳುವ ಮುನ್ನ ನಾಡಕರ್ಣಿ ಗೋವಾದ ಅಡ್ವೊಕೇಟ್ ಜನರಲ್ ಆಗಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಪ್ತರು ಕೂಡ ಆಗಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಾಡಕರ್ಣಿ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‍ಗಳಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಯಿತು.
ರೈತರಿಗೆ ಸಂಕಷ್ಟ:
ಬರ ಪರಿಹಾರವಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರ 1782 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಿದ್ದು, ಅದರಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದು ಉಳಿದ ಹಣವನ್ನು ಬಿಡುಗಡೆ ಮಾಡಿಲ್ಲ. ಆರಂಭದಲ್ಲಿ ಬಿಡುಗಡೆಯಾದ 450 ಕೋಟಿ ರೂ. ಖರ್ಚು ಮಾಡಿದ ಬಳಿಕ ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಹೇಳಿದರೆ ರಾಜ್ಯ ಸರ್ಕಾರ ಒಂದೇ ಬಾರಿಗೆ ಈ ಹಣವನ್ನು ಬಿಡುಗಡೆ ಮಾಡಿ ಎಂದು ತನ್ನ ವಾದವನ್ನು ಮಂಡಿಸುತ್ತಿದೆ. ಒಟ್ಟಿನಲ್ಲಿ ಈ ಎರಡೂ ಸರ್ಕಾರದ ಕಚ್ಚಾಟದಿಂದಾಗಿ ರೈತರಿಗೆ ಸಮಸ್ಯೆಯಾಗಿದ್ದು, ಈ ವಿಚಾರದ ಬಗ್ಗೆಯೂ ಇಂದು ರಾಜ್ಯ ಸಂಸದರು ಸಭೆಯಲ್ಲಿ ಪ್ರಸ್ತಾಪ ಮಾಡಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.