Connect with us

Latest

ಪಾಕಿಸ್ತಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ- ಮೋದಿ ವಾಗ್ದಾಳಿ

Published

on

ರಾಂಚಿ: ಪಾಕಿಸ್ತಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮೊದಲ ಬಾರಿಗೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‍ನ ಡುಮ್ಕಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್‍ನ ಭಾರತ್ ಬಚಾವೋ ರ್ಯಾಲಿ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮೊದಲ ಬಾರಿಗೆ ಪಾಕಿಸ್ತಾನದಂತೆ ಮಾಡಿದೆ. ಈ ಹಿಂದೆ ಯಾರಾದರೂ ಭಾರತೀಯ ರಾಯಭಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಇತಿಹಾಸವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿನ ನಿರುದ್ಯೋಗ, ಆರ್ಥಿಕತೆ ಕುಸಿತ ಹಾಗೂ ದೇಶದ ರೈತರ ಸ್ಥಿತಿಗತಿ ಕುರಿತು ವಿಶ್ವ ಮಟ್ಟದಲ್ಲಿ ಭಾರತ್ ಬಚಾವೋ ಶೀರ್ಷಿಕೆಯಡಿ ಕಾಂಗ್ರೆಸ್ ವಿಶ್ವಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಮೂಲಕ ವಿದೇಶಗಳಲ್ಲಿರುವ ಎಲ್ಲ ರಾಯಭಾರಿ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಮಾತನಾಡಿದ ಅವರು, ಈ ಕಾನೂನು ಲೋಕಸಭೆಯ ಎರಡೂ ಮನೆಗಳಲ್ಲಿ ಪಾಸ್ ಆಗಿದೆ. ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತರು ಭಾರತದಲ್ಲಿ ನಿರಾಶ್ರಿತರಾಗಿಯೇ ಉಳಿದಿದ್ದರು. ಇಂತಹವರಿಗೆ ಪೌರತ್ವ ನೀಡುವುದು ಇದರ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಈ ಕುರಿತು ಊಹಾಪೋಹಗಳನ್ನು ಸೃಷ್ಟಿಸುತ್ತಿವೆ. ಅಲ್ಲದೆ ನಾವೂ ಅವರಂತೆ ಮಾಡಿಲ್ಲವಲ್ಲ ಎಂಬ ಕಾರಣಕ್ಕೆ ಈ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ವಿಚಾರದಲ್ಲಿ ಹಿಂಸಾಚಾರ ನಡೆಸುತ್ತಿರುವವರು ಯಾರು ಎಂಬುದನ್ನು ಅವರ ಬಟ್ಟೆಗಳಿಂದಲೇ ಗುರುತಿಸಬಹುದು. ಇವರು ದೇಶದ ಅಭಿವೃದ್ಧಿ ಮಾರ್ಗಸೂಚಿಯನ್ನೇ ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಅತ್ತ ಈಶಾನ್ಯ ರಾಜ್ಯಗಳಲ್ಲಿಯೂ ಸಹ ವಿರೋಧದ ಹೋರಾಟ ಜೋರಾಗಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ನಾಯಕರು ಭಾರತ್ ಬಚಾವೋ ರ್ಯಾಲಿ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪೌರತ್ವ ಮಸೂದೆ ತಿದ್ದುಪಡಿ ಕುರಿತು ಮಾತನಾಡಿ, ಇದು ಭಾರತ ಆತ್ಮವನ್ನು ಬೇರ್ಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.

Click to comment

Leave a Reply

Your email address will not be published. Required fields are marked *