– ಸಂಘರ್ಷ ಪೀಡಿತ ಮಣಿಪುರಕ್ಕೆ INDIA ಒಕ್ಕೂಟದ 21 ಸಂಸದರ ನಿಯೋಗ ಭೇಟಿ; ರಾಜ್ಯಪಾಲರಿಗೆ ಜ್ಞಾಪನಾ ಪತ್ರ ಸಲ್ಲಿಕೆ
ಇಂಫಾಲ್: ಮಣಿಪುರ ಹಿಂಸಾಚಾರ (Manipur Violence) ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಪಕ್ಷಗಳ INDIA ಒಕ್ಕೂಟ ಈಗ ಮಣಿಪುರಕ್ಕೆ ಭೇಟಿ ನೀಡಿದೆ. INDIA ಒಕ್ಕೂಟದ 21 ಸಂಸದರ ನಿಯೋಗವು ಭಾನುವಾರ ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಿತು.
ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ (Anusuiya Uikey) ಅವರನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಸಂಘರ್ಷದ ಕುರಿತು ತಮ್ಮ ಜ್ಞಾಪನಾ ಪತ್ರವನ್ನು ಸಹ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ, ಮೇ ಆರಂಭದಿಂದ ರಾಜ್ಯವನ್ನು ಆವರಿಸಿರುವ ಜನಾಂಗೀಯ ಹಿಂಸಾಚಾರದಿಂದ ನೊಂದಿರುವ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದಾರೆ. ಇದನ್ನೂ ಓದಿ:
ನಿಯೋಗವು ಚುರಾಚಂದ್‌ಪುರ, ಇಂಫಾಲ್ ಮತ್ತು ಮೊಯಿರಾಂಗ್‌ನಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದೆ. ‘ಸಂಘರ್ಷದ ಆರಂಭದಿಂದಲೂ ಎರಡೂ ಕಡೆಯವರು ಬಿಚ್ಚಿಟ್ಟ ಹಿಂಸಾಚಾರದ ಕರಾಳ ಸನ್ನಿವೇಶಗಳು, ಸಂತ್ರಸ್ತರ ಆತಂಕ, ಅನಿಶ್ಚಿತತೆ, ನೋವು ಮತ್ತು ದುಃಖದ ಕಥೆಗಳನ್ನು ಕೇಳಿ ನಾವು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇವೆ. ಎಲ್ಲಾ ಸಮುದಾಯಗಳಲ್ಲಿ ಕೋಪ ಮತ್ತು ಪರಕೀಯತೆಯ ಭಾವನೆ ಇದೆ. ಇದನ್ನು ತಡ ಮಾಡದೇ ಪರಿಹರಿಸಬೇಕು’ ಎಂದು ನಿಯೋಗವು ಜ್ಞಾಪನಾ ಪತ್ರದಲ್ಲಿ ಒತ್ತಾಯಿಸಿದೆ.
ಮಣಿಪುರ ಸಂಘರ್ಷದಲ್ಲಿ ಇದುವರೆಗೂ 140 ಕ್ಕೂ ಹೆಚ್ಚು ಸಾವು, 500 ಕ್ಕೂ ಹೆಚ್ಚು ಮಂದಿಗೆ ಗಾಯ, 5,000 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ ಅಂಕಿಅಂಶಗಳಿವೆ. ಎರಡು ಸಮುದಾಯಗಳ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಫಲ್ಯವಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಇದುವರೆಗೂ 60,000 ಕ್ಕಿಂತ ಹೆಚ್ಚು ಜನರ ತಮ್ಮ ನೆಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಆಗಿದ್ದಾರೆ ಎಂದು ಪತ್ರದಲ್ಲಿ ಒಕ್ಕೂಟ ಹೇಳಿದೆ.
ಆದ್ಯತೆಯ ಆಧಾರದ ಮೇಲೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ವಿವಿಧ ಸ್ಟ್ರೀಮ್‌ಗಳ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದ್ಯತೆಯಾಗಿರಬೇಕು ಎಂದು ನಿಯೋಗವು ಪತ್ರದ ಮೂಲಕ ಸಲಹೆ ನೀಡಿದೆ.
ಕಳೆದ ಮೂರು ತಿಂಗಳಿನಿಂದ ಮುಂದುವರಿದ ಇಂಟರ್ನೆಟ್ ನಿಷೇಧವು ಆಧಾರರಹಿತ ವದಂತಿಗಳನ್ನು ಹೆಚ್ಚಿಸುತ್ತಿದೆ. ಇದು ಅಸ್ತಿತ್ವದಲ್ಲಿರುವ ಅಪನಂಬಿಕೆಯನ್ನು ಹೆಚ್ಚಿಸುತ್ತದೆ. ಗೌರವಾನ್ವಿತ ಪ್ರಧಾನಿಯವರ ಮೌನವು ಮಣಿಪುರದ ಹಿಂಸಾಚಾರದ ಬಗ್ಗೆ ಅವರ ನಿರ್ಲಜ್ಜ ಉದಾಸೀನತೆಯನ್ನು ತೋರಿಸುತ್ತದೆ ಎಂದು ನಿಯೋಗ ತರಾಟೆಗೆ ತೆಗೆದುಕೊಂಡಿದೆ.
ಸಂಘರ್ಷ ಪೀಡಿತ ಮಣಿಪುರಕ್ಕೆ INDIA ಒಕ್ಕೂಟದ 21 ಸಂಸದರ ನಿಯೋಗವು ಎರಡು ದಿನಗಳ ಭೇಟಿ ಕೈಗೊಂಡಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ರಾಜಕೀಯ ಮಾಡಲು ನಾವು ರಾಜ್ಯದಲ್ಲಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸ್ಪಷ್ಟಪಡಿಸಿದ್ದಾರೆ. ‘ನಾವು ಜನಾಂಗೀಯ ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಲು ಮತ್ತು ಸಮಸ್ಯೆ ತಿಳಿಯಲು ಇಲ್ಲಿಗೆ ಬಂದಿದ್ದೇವೆ. ಹಿಂಸಾಚಾರದ ಅಂತ್ಯ ಮತ್ತು ಶಾಂತಿಯ ಮರುಸ್ಥಾಪನೆಯನ್ನು ನಾವು ಬಯಸುತ್ತೇವೆ. ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇಡೀ ಜಗತ್ತು ಗಮನಿಸುತ್ತಿದೆ’ ಎಂದು ಮಾತನಾಡಿದ್ದರು.
Web Stories