– 8,500 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಇಂಫಾಲ್: ಸತತ 2 ವರ್ಷಗಳಿಗೂ ಮೀರಿ ಹೊತ್ತಿ ಉರಿದಿದ್ದ ಮಣಿಪುರ (Manipur) ಈಗ ಶಾಂತಿ ಹೆಜ್ಜೆಯಿಡುತ್ತಿದೆ. 2 ವರ್ಷಗಳಿಂದ ಮೈತೇಯಿ ಜನರಿಗೆ ನಿರ್ಬಂಧಿಸಿದ್ದ ಹೆದ್ದಾರಿಗಳನ್ನು ತೆರೆಯಲು ಕುಕಿ ಬುಡಕಟ್ಟು ಸಮುದಾಯ ಒಪ್ಪಿಗೆ ನೀಡಿದ ಬಳಿಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
India stands with Manipur. I assure the people of the state that there shall be both peace and progress there. We are committed to restore normalcy and uphold the dignity of women. pic.twitter.com/Cr7uo8ONOh
— Narendra Modi (@narendramodi) August 11, 2023
2023 ರಲ್ಲಿ ಜನಾಂಗೀಯ ಹಿಂಸಾಚಾರ (Manipur Conflict) ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಮಿಜೋರಾಂನ ಐಜ್ವಾಲ್ ನಿಂದ ಮಧ್ಯಾಹ್ನ 12:30ರ ಸುಮಾರಿಗೆ ಚುರಾಚಂದ್‌ಪುರಕ್ಕೆ ಬಂದಿಳಿಯಲಿದ್ದಾರೆ. ಸಿಎಂ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ಬಳಿಕ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿರುವ ಮಣಿಪುರಕ್ಕೆ ಇಂದಿನ ಭೇಟಿ ಮಹತ್ವದ್ದಾಗಿದೆ. ಇದನ್ನೂ ಓದಿ: ಮಣಿಪುರ ಮಾತುಕತೆ ಸಫಲ; ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ
ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ
ಕುಕಿ ಸಮುದಾಯ ಹಾಗೂ ಮೈತೇಯಿ ಸಮುದಾಯಗಳ ನಡುವೆ ನಡೆದ ಈ ಸುದೀರ್ಘ ಸಂಘರ್ಷದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಶಾಂತಿಯತ್ತ ಹೆಜ್ಜೆ ಇಡುತ್ತಿರುವ ಮಣಿಪುರದ ಅಭಿವೃದ್ಧಿಗೆ ಪ್ರಧಾನಿ ಮೋದಿ ಆದ್ಯತೆ ನೀಡಿದ್ದಾರೆ. ಕುಕಿ ಬುಡಕಟ್ಟು (Kuki community) ಬಹುಸಂಖ್ಯಾತ ಪ್ರದೇಶವಾದ ಚುರಾಚಂದ್‌ಪುರದ ಶಾಂತಿ ಮೈದಾನದಲ್ಲಿ 7,300 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಬಳಿಕ ಮೈತೇಯಿ ಬಹುಸಂಖ್ಯಾತ ಪ್ರದೇಶವಾದ ಇಂಫಾಲ್‌ನ ಕಾಂಗ್ಲಾದಲ್ಲಿ 1,200 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಟ್ಟಾರೆ 8,500 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಇಂದು ಚಾಲನೆ ನೀಡಲಿದ್ದಾರೆ.
ಇದರೊಂದಿಗೆ ಚುರಾಚಂದ್‌ಪುರ ಮತ್ತು ಇಂಫಾಲ್‌ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ನಂತರ ಎರಡೂ ಸ್ಥಳಗಳಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸೂಕ್ತ ಭದ್ರತೆ ನಿಯೋಜಿಸಲಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ
ಸಂಘರ್ಷ ಭೂಮಿಯಲ್ಲಿ ಮೊದಲ ಭಾಷಣ
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಬಗ್ಗೆ ಪ್ರಸ್ತಾಪಿಸಿದ್ದರು. ಆದ್ರೆ ಮಣಿಪುರ ನೆಲದಲ್ಲಿ ನಿಂತು ಭಾಷಣ ಮಾಡುತ್ತಿರೋದು ಇದೇ ಮೊದಲು. ಕುಕಿ ಮತ್ತು ಮೈತೇಯಿ ಪ್ರಾಭಲ್ಯವಿರುವ ಪ್ರದೇಶಗಳಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವು – ಮಣಿಪುರ ಮತ್ತೆ ಉದ್ವಿಗ್ನ
ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
ಮೀಟೈ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋಬರ್ಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ಆರಂಭವಾಗಿತ್ತು.
ಕಂಡಲ್ಲಿ ಗುಂಡು ಆದೇಶ
2023ರ ಮೇ 3ರಂದು ಶುರುವಾದ ಹಿಂಸಾಚಾರ ಒಂದೆರಡು ದಿನಗಳಲ್ಲೇ ಭಯಂಕರ ಸ್ವರೂಪ ಪಡೆಯಿತು. ಗಲಭೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಮಣಿಪುರ ಸರ್ಕಾರ, ಕಂಡಲ್ಲಿ ಗುಂಡು ಆದೇಶವನ್ನು ಜಾರಿಗೊಳಿಸಿತ್ತು. ಬಿಗಿಭದ್ರತೆಗಾಗಿ ಸಿಆರ್‌ಪಿಎಫ್, ಅಸ್ಸಾಂ ರೈಫಲ್ಸ್, ಸೇನೆಯನ್ನು ನಿಯೋಜನೆಗೊಳಿಸಲಾಗಿತ್ತು. ಈವರೆಗೆ ಸಂಘರ್ಷದಲ್ಲಿ ಸುಮಾರು 260 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಳಿಕ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಲೇ ಇತ್ತು. ಅಲ್ಲದೇ ಕೆಲ ಶಸ್ತ್ರಸಜ್ಜಿತ ಗುಂಪುಗಳು ಸಶಸ್ತ್ರಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುತ್ತಲೇ ಇದ್ದರು. ಈ ಸಂರ್ಭದಲ್ಲಿ ಅಮಾಯಕರೂ ಸಾವನ್ನಪ್ಪಿದ್ದರು. ಕೊನೆಗೆ ಸಂಘರ್ಷ ನಿಯಂತ್ರಿಸಲಾಗದೇ ಕಳೆದ ವರ್ಷ ಬಿರೇನ್ ಸಿಂಗ್ ಮಣಿಪುರ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಮಣಿಪುರದ ಚಾಂದೆಲ್‌ನಲ್ಲಿ ಎನ್‌ಕೌಂಟರ್ – 10 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ
ಮಾತುಕತೆ ಸಫಲ
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸುದೀರ್ಘ ಮಾತುಕತೆಯ ಬಳಿಕ ಕೇಂದ್ರ ಸರ್ಕಾರ, ಕುಕಿ ಗುಂಪು ಹಾಗೂ ಮಣಿಪುರ ಸರ್ಕಾರ ಹೊಸ ಒಪ್ಪಂದಕ್ಕೆ ಸಹಿ ಹಾಕಿದವು. ಇದರ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-2 ಅನ್ನು ಮತ್ತೆ ತೆರೆಲಾಗಿದೆ. ಇದರಿಂದ ಅಗತ್ಯವಸ್ತುಗಳ ಸಾಗಾಟ ಜೊತೆಗೆ ಪ್ರಯಾಣಿಕರ ಸಂಚಾರಕ್ಕೂ ಅನುಕೂಲವಾಗಿದೆ. ಅಲ್ಲದೇ ಕುಕಿ-ಝೋ ಕೌನ್ಸಿಲ್ (KZC) ಈ ಮಾರ್ಗದಲ್ಲಿ ಶಾಂತಿ ಕಾಪಾಡಿಕೊಳ್ಳಲು ಭದ್ರತಾ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.