– ನಾಳೆ ಮೋದಿ ಕರ್ನಾಟಕ ಕಾರ್ಯಕ್ರಮದ ಸಂಪೂರ್ಣ ವಿವರ
– ನರೇಂದ್ರ ಮೋದಿ ಪೂಜೆ ಸಲ್ಲಿಕೆ ವೇಳೆ ಯಾರಿಗೂ ಪ್ರವೇಶವಿರಲ್ಲ
ಬೆಂಗಳೂರು/ಮಂಗಳೂರು: ನಾಳೆ ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಸಂಪ್ರದಾಯ ಬದ್ಧವಾಗಿಯೇ ಪೂಜೆಯಲ್ಲೇ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಮೋದಿ ಆಪ್ತವಲಯದಿಂದ ಲಭ್ಯವಾಗಿದೆ.
Advertisement
ಧರ್ಮಸ್ಥಳದ ಮಂಜುನಾಥ ಸನ್ನಿಧಿಯ ಸಂಪ್ರದಾಯದಂತೆ ಸುಮಾರು ಅರ್ಧ ಗಂಟೆಗಳ ಕಾಲ ಪೂಜಾ ವಿಧಿವಿಧಾನಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿಗಾಗಿ ಪಂಚೆ, ಶಲ್ಯ ರೆಡಿಯಾಗಿದ್ದು, ಇದನ್ನು ಧರಿಸಿಯೇ ಪೂಜೆ ಮಾಡಲಿದ್ದಾರೆ. ಪೂಜೆ ವೇಳೆ ಮೋದಿ ಬಿಟ್ಟು ಬೇರೆ ಸಚಿವರು, ಅಧಿಕಾರಿಗಳಿಗೆ ಎಂಟ್ರಿ ಇರಲ್ಲ. ಧರ್ಮಸ್ಥಳದ ಧರ್ಮಾಧಿಕಾರಿಗಳು, ನರೇಂದ್ರ ಮೋದಿ ಹಾಗೂ ಪುರೋಹಿತರು ಮಾತ್ರ ಪೂಜೆ ವೇಳೆ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ನಾಳೆ ಏನೇನು ನಡೆಯುತ್ತೆ?: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನದ ಬಳಿಕ ಉಜಿರೆಗೆ ರಸ್ತೆ ಮಾರ್ಗದಲ್ಲಿ ಆಗಮಿಸಲಿದ್ದಾರೆ. ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದಲ್ಲಿ ಹೆಗ್ಗಡೆಯವರ ನೂತನ ಸಂಕಲ್ಪವಾದ ‘ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಅಭಿಯಾನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
Advertisement
ಇದೇ ವೇಳೆ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಅವರಿಗೆ ರುಪೇ ಕಾರ್ಡ್ ಗಳನ್ನು ಮೋದಿ ವಿತರಿಸಲಿದ್ದಾರೆ. ಸ್ವ-ಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತವಾಗಿ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರಗಳನ್ನು ಪ್ರೇರೇಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದು ಇದಕ್ಕೆ ನಾಳೆ ಅಂಕಿತ ಬೀಳಲಿದೆ.
ಈ ಕಾರ್ಯಕ್ರಮದಲ್ಲಿ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ನಿಗ್ರಹ ದಳದವರು ಧರ್ಮಸ್ಥಳ, ಉಜಿರೆ ಮತ್ತು ಕನ್ಯಾಡಿಯಲ್ಲಿ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.
ವಾಹನ ನಿಲುಗಡೆ: ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಾಥಮಿಕ ಶಾಲೆ ಬಳಿ ಮತ್ತು ಅಜ್ಜರಕಲ್ಲು ಮೈದಾನದಲ್ಲಿ ಹಾಗೂ ಇತರರು ಜನಾರ್ಧನ ಸ್ವಾಮಿ ದೇವಸ್ಥಾನದ ಬಳಿ ವಾಹನಗಳನ್ನು ನಿಲ್ಲಿಸಬಹುದು. ಧರ್ಮಸ್ಥಳದಿಂದ ಉಜಿರೆಗೆ ಭಾನುವಾರ ಬೆಳಿಗ್ಗೆ 9 ಗಂಟೆ ವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ. 9 ಗಂಟೆ ಬಳಿಕ ಅಪರಾಹ್ನ ಎರಡು ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಭಾನುವಾರ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆ ವರೆಗೆ ಎಲ್ಲಾ ಅಂಗಡಿಗಳನ್ನು ಮುಚ್ಚಲು ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ಸಮಾರಂಭದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಬೆಳಿಗ್ಗೆ 10 ಗಂಟೆಗೆ ಮೊದಲು ಬಂದು ಆಸೀನರಾಗಬಹುದು. ಸಾರ್ವಜನಿಕರು ಉಜಿರೆ ಕಡೆಯಿಂದ ಬೆಳಾಲು ರಸ್ತೆ ಮೂಲಕ ಕ್ರೀಡಾಂಗಣ ಪ್ರವೇಶಿಸಬಹುದು. ವಿ.ಐ.ಪಿ. ಪಾಸ್ ಹೊಂದಿರುವವರು ಎಸ್.ಡಿ.ಎಂ. ಕಾಲೇಜು ಬಳಿ ನಿರ್ಮಿಸಿದ ದ್ವಾರದ ಮೂಲಕ ಪ್ರವೇಶಿಸಬಹುದು. ಭದ್ರತೆಗಾಗಿ ಉಜಿರೆ ಮತ್ತು ಧರ್ಮಸ್ಥಳದಲ್ಲಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಎಲ್ಲಾ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ.
ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿ. ರಮಾನಾಥ ರೈ, ಸಂಸದರಾದ ಬಿ. ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಡಿ. ವೀರೇಂದ್ರ ಹೆಗ್ಗಡೆಯವರು, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.
ಪ್ರಧಾನಿ ಭೇಟಿ ವೇಳಾಪಟ್ಟಿ: ಬೆಳಿಗ್ಗೆ 10.30ಕ್ಕೆ ಮಂಗಳೂರಿನಿಂದ ವಿಶೇಷ ಸೇನಾ ಹೆಲಿಕಾಪ್ಟರ್ ನಲ್ಲಿ ಹೊರಟು ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. 11.00 ಗಂಟೆಗೆ ಹೆಗ್ಗಡೆಯವರ ನಿವಾಸಕ್ಕೆ ಭೇಟಿ ನೀಡಿ, 11.30ಕ್ಕೆ ದೇವರ ದರ್ಶನ ಪಡೆಯಲಿದ್ದಾರೆ. 11.40ಕ್ಕೆ ರಸ್ತೆ ಮೂಲಕ ಉಜಿರೆಗೆ ಪ್ರಯಾಣ ಬೆಳೆಸಿ, 12.00 ಗಂಟೆಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್ ಗೆ ಪ್ರಯಾಣಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.