ನಾಗ್ಪುರ: ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಚೇರಿ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದರು.
ಯುಗಾದಿ (Ugadi) ವಿಶೇಷ ದಿನ ಮತ್ತು ಈ ವರ್ಷ ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರೇಶಿಮ್ ಭಾಗ್‌ನಲ್ಲಿರುವ ಸ್ಮೃತಿ ಮಂದಿರಕ್ಕೆ (Smriti Mandir) ಮೋದಿ ಭೇಟಿ ನೀಡಿ ಆರ್‌ಎಸ್‌ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಹಾಗೂ ಎರಡನೇ ಸರಸಂಘ ಸಂಚಾಲಕ ಎಂ.ಎಸ್ ಗೋಲ್ವಾಲ್ಕರ್ ಅವರ ಸ್ಮಾರಕಗಳಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಕೇಶವ್ ಬಲಿರಾಮ್ ಹೆಡಗೇವಾರ್ ಮತ್ತು ಗೋಲ್ವಾಲ್ಕರ್ ಸ್ಮಾರಕಗಳಿಗೆ ಗೌರವ ಸಲ್ಲಿಸಿದ ಬಳಿಕ ಮೋದಿ ಅವರು ಸಂದರ್ಶಕರ ಪುಸ್ತಕದಲ್ಲಿ ಹಿಂದಿಯಲ್ಲಿ ಸಂದೇಶ ಬರೆದರು. ಆರ್‌ಎಸ್‌ಎಸ್‌ನ ಎರಡು ಬಲವಾದ ಸ್ತಂಭಗಳ ಸ್ಮಾರಕವು ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಲಕ್ಷಾಂತರ ಸ್ವಯಂಸೇವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಬರೆದಿದ್ದಾರೆ.
ನಾಗ್ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯನ್ನು ಮುಖ್ಯಮಂತ್ರಿ ಫಡ್ನವೀಸ್, ನಿತಿನ್ ಗಡ್ಕರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಬರ ಮಾಡಿಕೊಂಡರು. ಸ್ಮೃತಿ ಭವನದಲ್ಲಿರುವ ಆರ್‌ಎಸ್‌ಎಸ್‌ನ ಕಚೇರಿ ಸಿಬ್ಬಂದಿಯನ್ನು ಮೋದಿ ಭೇಟಿಯಾಗಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು.
2013 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಕೊನೆಯ ಬಾರಿಗೆ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಈ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಗಸ್ಟ್ 27, 2000 ಇಸ್ವಿಯಲ್ಲಿ ಡಾ. ಹೆಡಗೇವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದರು.
ಕೆಲ ದಿನಗಳ ಹಿಂದೆ ಲೆಕ್ಸ್ ಫ್ರಿಡ್‌ಮನ್ ಪಾಡ್‌ಕಾಸ್ಟ್‌ನಲ್ಲಿ ಮೋದಿ ಅವರು ಆರ್‌ಎಸ್‌ಎಸ್ ಜೊತೆಗಿನ ಸಂಬಂಧ ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು. ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ನಂತಹ ಗೌರವಾನ್ವಿತ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ ಎಂದು ಗುಣಗಾನ ಮಾಡಿದರು.
ಆರ್‌ಎಸ್‌ಎಸ್‌ಗಿಂತ ದೊಡ್ಡ ‘ಸ್ವಯಂಸೇವ ಸಂಘ’ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ನ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಮ್ಮ ವೈದಿಕ ಸಂತರು ಮತ್ತು ಸ್ವಾಮಿ ವಿವೇಕಾನಂದರು ಏನನ್ನು ಕಲಿಸಿದರೋ ಅದೇ ರೀತಿ ʻಸಮಾಜ ಸೇವೆಯೇ ದೇವರ ಸೇವೆʼ ಎಂದು ಸಂಘ ಕಲಿಸುತ್ತದೆ ಎಂದು ಹೇಳಿದ್ದರು.
ಆರ್‌ಎಸ್‌ಎಸ್ ನಂತಹ ಗೌರವಾನ್ವಿತ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ. ಬಾಲ್ಯದಲ್ಲಿ ಆರ್‌ಎಸ್‌ಎಸ್ ಕೂಟಗಳಲ್ಲಿ ಭಾಗವಹಿಸುವುದು ಸಂತೋಷವಾಗುತ್ತಿತ್ತು. ಆಗಲೂ ನನ್ನ ಮನಸ್ಸಿನಲ್ಲಿ ಯಾವಾಗಲೂ ಒಂದು ಗುರಿ ಇತ್ತು. ಅದರಂತೆ ದೇಶಕ್ಕೆ ಉಪಯೋಗವಾಗುವುದನ್ನು ಮಾಡಲು ‘ಸಂಘ’ ನನಗೆ ಕಲಿಸಿದೆ. ಈ ವರ್ಷ ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸಿದೆ ಎಂಬುದು ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದ್ದರು.