ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) ಫಲಿತಾಂಶವು ಜೂನ್ 4 ರಂದು ಹೊರಬಿದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 292 ಸ್ಥಾನಗಳನ್ನು ಗೆದ್ದಿದ್ದು, ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ನಡೆಸುವುದು ಖಚಿತವಾಗಿದೆ. ಆದರೆ ಬಿಜೆಪಿ ಗೆದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಬಹುಮತ ಸಾಬೀತು ಪಡಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸಭೆಯನ್ನು ಕರೆಯಲಾಗಿದೆ. ನರೇಂದ್ರ ಮೋದಿ (Narendra Modi) ನಿವಾಸದಲ್ಲಿ ನಡೆಯುವ ಈ ಮಹತ್ವದ ಸಭೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್ ಕುಮಾರ್, ಏಕನಾಥ್ ಶಿಂಧೆ, ಪವನ್ ಕಲ್ಯಾಣ್ ಹಾಗೂ ಹೆಚ್‌ಡಿಕೆ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಆದರೆ ಎನ್‌ಡಿಎ ಮೈತ್ರಿಕೂಟದ ಈ ಸಭೆಗೆ ಅಜಿತ್ ಪವಾರ್ ಗೈರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮಿತ್ ಶಾ, ನಡ್ಡಾ ಹಾಗೂ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. ಎನ್‌ಡಿಎ ಅಂಗಪಕ್ಷಗಳು ಹಕ್ಕು ಪ್ರತಿಪಾದನೆಗೆ ಒಪ್ಪಿಗೆ ಸೂಚಿಸಿವೆ. ಹೀಗಾಗಿ ಸಭೆಯ ಬಳಿಕ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದನೆ ಮಾಡುವ ಸಾಧ್ಯತೆಗಳಿವೆ.
ಇತ್ತ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಜೂನ್ 8 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮೋದಿಯವರು ಈಗಾಗಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಎನ್‌ಡಿಎ: ಬಿಜೆಪಿ- 239, ಜೆಡಿಯು – 12, ಟಿಡಿಪಿ – 16, ಶಿವಸೇನಾ (ಶಿಂಧೆ ) – 6 , ಜೆಡಿಎಸ್-2, ಆರ್‌ಎಲ್‌ಡಿ- 2, ಎಲ್‌ಎಸ್‌ಪಿ- 2, ಎಲ್‌ಜೆಪಿ – 5, ಎಜೆಪಿ-1, ಎಜೆಎಸ್‌ಯು-1, ಅಪ್ನಾ ದಳ- 1, ಎನ್‌ಸಿಪಿ-1.
ಇಂಡಿಯಾ ಒಕ್ಕೂಟ: ಕಾಂಗ್ರೆಸ್- 100, ಎಸ್‌ಪಿ-37, ಟಿಎಂಸಿ-29, ಡಿಎಂಕೆ-22, ಎನ್‌ಸಿಪಿ-ಎಸ್‌ಪಿ-7, ಸಿಪಿಎಂ- 4, ಆರ್‌ಜೆಡಿ-4, ಐಯುಎಂಎಲ್-3, ಜೆಎಂಎಂ-3, ಎಎಪಿ-3, ಸಿಪಿಐ-2 ಸಿಪಿಐ (ಎಂಐ) (ಎಲ್)-2.