ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜುಲೈ 4 ರಂದು ಬೆಳಗ್ಗೆ 11 ಗಂಟೆಗೆ ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಭೇಟಿಯಾಗಿ ಅಭಿನಂದಿಸಲಿದ್ದಾರೆ.
ಭಾರೀ ಮಳೆಯಿಂದಾಗಿ ಟೀಂ ಇಂಡಿಯಾ (Team India) ಎಲ್ಲಾ ಆಟಗಾರರು, ಬಿಸಿಸಿಐ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಬಾರ್ಬಡೋಸ್‌ನಲ್ಲಿ (Barbados) ಸಿಲುಕಿಕೊಂಡರು. ಅಂತಿಮವಾಗಿ ತಂಡವು ಬಾರ್ಬಡೋಸ್‌ನಿಂದ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಹೊರಟಿದ್ದು, ಮತ್ತು ನಾಳೆ ಮುಂಜಾನೆ ರಾಷ್ಟ್ರ ರಾಜಧಾನಿಯನ್ನು ತಲುಪಲಿದ್ದಾರೆ.
ವಿಶ್ವಕಪ್ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಟೀಂ ಇಂಡಿಯಾ ಆಟಗಾರರೊಂದಿಗೆ ಮಾತನಾಡಿದ್ದರು. ಇದರ ಫೋಟೋಗಳನ್ನು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಅವರನ್ನು ಖುದ್ದು ಭೇಟಿಯಾಗಿ ಐತಿಹಾಸಿಕ ಹಾಗೂ ಸ್ಮರಣೀಯ ವಿಜಯಕ್ಕಾಗಿ ಅಭಿನಂದಿಸಲಿದ್ದಾರೆ.
ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ ಮತ್ತು ಕೆರಿಬಿಯನ್‌ನಲ್ಲಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ತಂಡವು ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಲೋಕಸಭೆಯಿಂದ ಅಭಿನಂದನೆ
ರೋಹಿತ್ ಶರ್ಮಾ ಮತ್ತು ಅವರ ಟೀಂ ಅಂತಿಮವಾಗಿ 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಜೂನ್ 29 ರಂದು ಗೆದ್ದ T20 ವಿಶ್ವಕಪ್ ಟ್ರೋಫಿಯೊಂದಿಗೆ ಮನೆಗೆ ಮರಳುತ್ತಿದ್ದಾರೆ. ವಿರಾಟ್ ಕೊಹ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 59 ಎಸೆತಗಳಲ್ಲಿ 76 ರನ್ ಹೊಡೆದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಸ್‌ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಕಳೆದ ವರ್ಷ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ODI ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡಿತ್ತು. ಈ ವೇಳೆ ಸ್ವತಃ ಪ್ರಧಾನಿಯವರೇ ಡ್ರೆಸ್ಸಿಂಗ್ ರೂಂಗೆ ತೆರಳಿ ಆಟಗಾರರನ್ನು ಸಮಾಧಾನ ಪಡಿಸಿದ್ದರು.