Connect with us

ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

ನವದೆಹಲಿ: ಏಷ್ಯಾದಲ್ಲೇ ಅತೀ ಉದ್ದವಾದ ರಸ್ತೆ ಸುರಂಗ ಮಾರ್ಗವನ್ನು ಭಾರತದಲ್ಲಿ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ. ಈ ಸುರಂಗದ ವಿಶೇಷತೆ ಏನು? ಎಷ್ಟು ಉದ್ದವಿದೆ? ನಿರ್ಮಾಣ ವೆಚ್ಚ ಎಷ್ಟು ಎಂಬ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

1. ಎಲ್ಲಿ ನಿರ್ಮಾಣವಾಗಿದೆ?
ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ 286 ಕಿಮೀ ಉದ್ದದ ಚತುಷ್ಪಥ ರಸ್ತೆ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣವಾಗಿದೆ.

                             

2. ಎಷ್ಟು ಉದ್ದವಿದೆ?
ಈ ಸುರಂಗ 9.2 ಕಿ.ಮೀ ಉದ್ದವಿದೆ. ಎರಡು ಟ್ಯೂಬ್‍ಗಳ ಈ ಸುರಂಗ ಸಮುದ್ರಮಟ್ಟದಿಂದ 1200 ಮೀಟರ್ ಎತ್ತರದಲ್ಲಿದೆ. ಸುರಂಗದ ಪಕ್ಕದಲ್ಲೇ ಪಾರು ಸುರಂಗ(ಎಸ್ಕೇಪ್ ಟನಲ್) ಕೂಡ ಇದೆ.

3. ನಿರ್ಮಾಣ ಕಾರ್ಯ ಶುರುವಾಗಿದ್ದು ಯಾವಾಗ?
2011ರ ಮೇ 23ರಂದು ಹಿಮಾಲಯದ ಕೆಳ ಪರ್ವತ ಶ್ರೇಣಿಯಲ್ಲಿ ಸುರಂಗ ನಿರ್ಮಾಣ ಕಾರ್ಯ ಆರಂಭಿಸಲಾಯ್ತು. ಇದೀಗ 6 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 2017ರ ಮಾಚ್ 9 ಹಾಗೂ ಮಾರ್ಚ್ 15ರ ನಡುವೆ ಟ್ರಯಲ್ ರನ್ ಕೂಡ ಯಶಸ್ವಿಯಾಗಿ ನಡೆಸಲಾಗಿದೆ.

4. ವೆಚ್ಚ ಎಷ್ಟು?
ಈ ಯೋಜನೆಗೆ ಸುಮಾರು 2,519 ಕೋಟಿ ರೂ. ವೆಚ್ಚ ಮಾಡಲಾಗಿದೆ.

5. ಲಾಭ ಏನು?
* ಈ ಸುರಂಗ ಮಾರ್ಗದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರದ ಸಮಯ ಕಡಿಮೆಯಾಗಲಿದ್ದು, ಪ್ರವಾಸಿಗರು ಕಣಿವೆಯನ್ನು ತಲುಪಲು ಅನುಕೂಲವಾಗಲಿದೆ.
* ಜಮ್ಮುವಿನಿಂದ ಶ್ರೀನಗರಕ್ಕಿರುವ ಪ್ರಯಾಣ ದೂರ 41 ಕಿ.ಮೀ ನಷ್ಟು ಕಡಿಮೆಯಾಗಲಿದೆ.
* ಸಂಚಾರದ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ.
* ಪ್ರತಿದಿನ 27 ಲಕ್ಷ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ.
* ಮಂಜು ಹಾಗೂ ಭೂಕುಸಿತದಿಂದ ಚಳಿಗಾಲದ ಬಹುತೇಕ ಸಮಯ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ರೆ ಇನ್ಮುಂದೆ ಸುರಂಗ ಮಾರ್ಗದಲ್ಲಿ ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾಗಿದ್ದು, ಕಣಿವೆಯಲ್ಲಿ ವಾಣಿಜ್ಯೋದ್ಯಮಕ್ಕೆ ಉತ್ತೇಜನ ಸಿಗಲಿದೆ.

6. ವಿಶೇಷತೆ ಏನು?
ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ.

7. ಟೋಲ್ ಶುಲ್ಕ ಎಷ್ಟು?
* ಲೈಟ್ ಮೋಟಾರ್ ವಾಹನಗಳಿಗೆ ಒಂದು ಕಡೆಗೆ ಹೋಗಲು 55 ರೂ. ಕೊಡ್ಬೇಕು. ಹೋಗಿ ವಾಪಸ್ ಬರಲು 85 ರೂ., ಹಾಗೆ 1870 ರೂ. ನೀಡಿದ್ರೆ ಒಂದು ತಿಂಗಳು ಪೂರ್ತಿ ಸಂಚರಿಸಬಹುದು.
* ಮಿನಿ ಬಸ್‍ಗಳು ಒಂದು ಕಡೆಗೆ ಸಂಚರಿಸಲು 90 ರೂ., ಎರಡೂ ಕಡೆಗೆ 135 ರೂ. ಕೊಡ್ಬೇಕು.
* ದೊಡ್ಡ ಬಸ್ ಮತ್ತು ಟ್ರಕ್‍ಗಳು ಒಂದು ಕಡೆಗೆ ಸಂಚರಿಸಲು 190 ರೂ ಕೊಡಬೇಕು. ಹಾಗೂ ಎರಡೂ ಕಡೆಯ ಟೋಲ್‍ಗೆ 285 ರೂ. ಕಟ್ಟಬೇಕು.
* ಸುರಂಗದೊಳಗೆ ವಾಹನಗಳು ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸಬೇಕು. ಲೋ ಬೀಮ್‍ನಲ್ಲಿ ಹೆಡ್‍ಲೈಟ್‍ಗಳನ್ನ ಬಳಸಬೇಕು.
* ಪೆಟ್ರೋಲ್, ಡೀಸೆಲ್ ಟ್ಯಾಂಕರ್ ಸೇರಿದಂತೆ ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತುಗಳನ್ನ ಹೊತ್ತೊಯ್ಯುವ ವಾಹನಗಳಿಗೆ ಸುರಂಗನೊಳಗೆ ಪ್ರವೇಶವಿಲ್ಲ.

8. ಉದ್ಘಾಟನೆ ಯಾವಾಗ?
ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ.

9. ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಯಾವುದು? ಎಲ್ಲಿದೆ?
ನಾರ್ವೇಯಲ್ಲಿರುವ 24.51 ಕಿ.ಮೀ ಉದ್ದದ ಲೇರ್ಡಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ.

Advertisement
Advertisement