ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

Public TV
2 Min Read
Narendra Modi 7

ಗಾಂಧಿನಗರ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತವೆಯೋ, ಅಲ್ಲಿಂದ ಮೋದಿ ಗ್ಯಾರಂಟಿ (Modi Guarantee) ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಯ ನೀಡಿದರು.

ಗುಜರಾತ್‌ (Gujarat) ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರಿಂದು ರಾಜ್‌ಕೋಟ್‌, ಪಂಜಾಬ್‌ನ ಬಟಿಂಡಾ, ಉತ್ತರ ಪ್ರದೇಶದ ರಾಯ್‌ಬರೇಲಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11,500 ಕೋಟಿ ರೂ. ವೆಚ್ಚದ 200ಕ್ಕೂ ಹೆಚ್ಚು ಆರೋಗ್ಯ ರಕ್ಷಣೆ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೇ 48,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ದೇಶಕ್ಕೆ ಸಮರ್ಪಿಸಿದರು. ಬಳಿಕ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಕಳೆದ 6-7 ದಶಕಗಳಲ್ಲಿ ನಡೆದಿದ್ದಕ್ಕಿಂತ ಹಲವು ಪಟ್ಟು ವೇಗವಾಗಿ ನಮ್ಮ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಲ್ಲಿ ಇತರರ ಗ್ಯಾರಂಟಿಗಳು ಕೊನೆಗೊಳ್ಳುತ್ತವೆಯೋ ಅಲ್ಲಿಂದ ಮೋದಿ ಗ್ಯಾರಂಟಿ ಪ್ರಾರಂಭವಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

ಸ್ವಾತಂತ್ರ್ಯಾ ನಂತರ 50 ವರ್ಷಗಳ ವರೆಗೆ ದೇಶದಲ್ಲಿ ಒಂದೇ ಒಂದು AIIMS ಆಸ್ಪತ್ರೆ ಇತ್ತು. ಸ್ವಾತಂತ್ರ್ಯಾ ನಂತರ 7 ದಶಕಗಳಲ್ಲಿ 7 ಏಮ್ಸ್‌ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದ್ದರೂ ಹಿಂದಿನ ಸರ್ಕಾರಗಳು ಅವುಗಳನ್ನು ಪೂರ್ಣಗೊಳಿಸಿಲ್ಲ. ಕೆಲವರಂತೂ ತಮ್ಮ ರಾಜ್ಯಗಳಿಗೆ ಏಮ್ಸ್‌ ಆಸ್ಪತ್ರೆ ಪಡೆಯುವಷ್ಟರಲ್ಲಿ ಸುಸ್ತಾಗುತ್ತಿದ್ದರು. ಆದ್ರೆ ‌ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ 10 ಏಮ್ಸ್‌ ಆಸ್ಪತ್ರೆಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ಏಮ್ಸ್‌ ಹೊರತುಪಡಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳೂ ಒಂದರ ಹಿಂದೆ ಒಂದರಂತೆ ತಲೆ ಎತ್ತುತ್ತಿವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.

ಇನ್ನೂ ಕಾಂಗ್ರೆಸ್‌ ರಾಜಮನೆತನವು ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಅಧಿಕಾರ ಹಿಡಿದಿದೆ. ಆದ್ರೆ ಆ ಕ್ಷೇತ್ರದ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ರಾಯ್‌ಬರೇಲಿಯಲ್ಲೂ ಏಮ್ಸ್‌ ಸ್ಥಾಪಿಸುವ ಭರವಸೆ ನೀಡಿದ್ದೇನೆ. ಕೊಟ್ಟ ಭರವಸೆಯನ್ನು ಈಡೇರಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್

ಆರೋಗ್ಯ ಸಂಪದ್ಭರಿತ ದೇಶವಾಗಬೇಕು: ಭಾರತ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ಟಾಪ್‌-5 ದೇಶಗಳಲ್ಲಿಯೂ ಒಂದಾಗಬೇಕು. ಅಭಿವೃದ್ಧಿ ಹೊಂದಿದ ಭಾರತದಲ್ಲಿ ಆರೋಗ್ಯ ಸೌಲಭ್ಯಗಳ ಮಟ್ಟ ಹೇಗಿರುತ್ತದೆ ಎಂಬುದನ್ನು ನಾವು ಈಗ ನೋಡುತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಪ್ರದೇಶಗಳಿಗೂ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗಳನ್ನು ವಿಸ್ತರಿಸಿದ್ದೇವೆ. ಹಿಂದೆ ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು 309 ರಿಂದ 706ಕ್ಕೆ ಕೊಂಡೊಯ್ಯಲಾಗಿದೆ. ಎಂಬಿಬಿಎಸ್ ಮತ್ತು ಮೆಡಿಕಲ್ ಪಿಜಿ ಸೀಟುಗಳ ಸಂಖ್ಯೆ 50,000 ದಿಂದ 1 ಲಕ್ಷಕ್ಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.

Share This Article