– ದೇಶದ ಜನತೆ ಫಕೀರನ ಜೋಳಿಗೆ ತುಂಬಿದ್ರು
– ಭಾರತವನ್ನು ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಿಸೋಣ
ನವದೆಹಲಿ: ಮೊದಲ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಕ್ಷೇತ್ರಗಳನ್ನು ಗೆದ್ದಿತ್ತು. ಇಂದು ಅದೇ ಬಿಜೆಪಿ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತದಾನಗೈದ ಎಲ್ಲರಿಗೂ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಬಿಜೆಪಿ ಗೆಲುವು ಇತಿಹಾಸವನ್ನು ಬರೆದಿದೆ. ಸ್ವತಂತ್ರ ಭಾರತದ ಮೊದಲ ಬಾರಿಗೆ ರಣ ರಣ ಬಿಸಿಲನ್ನು ಲೆಕ್ಕಿಸದೇ ಮತದಾರರು ಬಂದು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಎಲ್ಲ ಅಡೆತಡೆಗಳನ್ನು ಮೀರಿ ಲೋಕತಂತ್ರದ ಹಬ್ಬದಲ್ಲಿ ಕೆಲಸ ಮಾಡಿದ ಚುನಾವಣಾ ಆಯೋಗ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.
Advertisement
ಮಹಾಭಾರತದ ಯುದ್ಧದ ಬಳಿಕ ಶ್ರೀಕೃಷ್ಣನನ್ನು ಕೆಲವರು ನೀವು ಯಾವ ಪಕ್ಷದಲ್ಲಿದ್ದೀರಿ ಎಂದು ಕೇಳಿದ್ದರು. ಇಂದು ಅದೇ ಉತ್ತರವನ್ನು ಭಾರತದ ಜನತೆಯ ಮೂಲಕ ನಾನು ಯಾರ ಪಕ್ಷದಲ್ಲಿಯೂ ಇರಲಿಲ್ಲ. ನಾವು ಹಸ್ತಿನಾಪುರಕ್ಕಾಗಿ ನಿಂತಿದ್ದೆ. ಇಂದು ಕೋಟಿ ಕೋಟಿ ಭಾರತೀಯರು ಶ್ರೀಕೃಷ್ಣನ ರೂಪದಲ್ಲಿ ಭಾರತದ ಅಭಿವೃದ್ಧಿ ಪರ ನಿಂತಿದ್ದರ ಪರಿಣಾಮ ನಾನು ನಿಮ್ಮ ಮುಂದಿದ್ದೇನೆ ಎಂದರು.
Advertisement
ಚುನಾವಣೆಯಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರನು ಸ್ಪರ್ಧೆ ಮಾಡಿದ್ದರು. ಹಾಗಾಗಿ ಇದು ಜನತೆಗೆ ಗೆಲುವು. ಬಿಜೆಪಿಯ ಈ ಗೆಲುವನ್ನು ದೇಶದ ಜನರಿಗೆ ಅರ್ಪಿಸಲು ನಾನು ಇಚ್ಛಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳು ನಮ್ಮ ಕಡೆಯಿಂದ ಶುಭಾಶಯಗಳು. ಗೆದ್ದ ಅಭ್ಯರ್ಥಿಗಳು ಹೆಗಲಿಗೆ ಹೆಗಲು ನೀಡಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ. ಪಕ್ಷ ಯಾವುದೇ ಇರಲಿ ದೇಶದ ಅಭಿವೃದ್ಧಿ ನಮ್ಮದಾಗಿರಲಿ ಎಂದು ಹೇಳಿದರು.
Advertisement
ಕೇಂದ್ರ ಸರ್ಕಾರ ಅಭಿವೃದ್ಧಿಯನ್ನ ಮಂತ್ರವಾಗಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ ಎಂದು ನಮ್ಮನ್ನು ಗೆಲ್ಲಿಸಿದ ದೇಶದ ಜನತೆಗೆ ಎಲ್ಲರ ಪರವಾಗಿ ಭರವಸೆ ನೀಡುತ್ತೇನೆ. ದೇಶದ ಸಾಮಾನ್ಯ ನಾಗರೀಕನು ಲೋಕತಂತ್ರದ ಬಾವುಟವನ್ನು ಇಂದು ಎತ್ತಿ ಹಿಡಿದಿರುವುದು ನಮ್ಮ ಮುಂದಿದೆ. ಹಾಗಾಗಿ ಸಾಮಾನ್ಯ ನಾಗರೀಕರನ ಮೂಲಭೂತ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. 20ನೇ ಶತಮಾನದ ರಾಜಕೀಯ ನಾಯಕರು ತಮ್ಮ ತಂತ್ರಗಳನ್ನು ಬಿಡಬೇಕು. ನಾವೆಲ್ಲ 21ನೇ ಶತಮಾನದಲ್ಲಿ ಇದ್ದೇವೆ. ಜನರು ಮೋದಿ ಮೋದಿ ಎಂದು ಹೇಳುವ ಮೂಲಕ ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
Advertisement
ದೇಶದ ರೈತ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ, ಕಾನೂನು ನಿಯಮಗಳನ್ನು ಪಾಲಿಸುವ ಸೇರಿದಂತೆ ಇದು ಎಲ್ಲರ ಜಯವಾಗಿದೆ. ಮಹಾಮೈತ್ರಿಕೂಟದ ನಾಯಕರು ಜಾತ್ಯಾತೀತ ಹೆಸರಿನ ಮುಖವಾಡ ಧರಿಸಿ ಒಂದಾಗಿದ್ದರು. ಆದ್ರೆ ಜಾತ್ಯಾತೀತ ಮುಖವಾಡ ಧರಿಸಿದ್ದ ಎಲ್ಲರಿಗೂ ದೇಶದ ಜನತೆ ಉತ್ತರ ನೀಡಿದ್ದು, ಇಂದು ಯಾರು ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದರು.
ಈ ಚುನಾವಣೆ 21ನೇ ಶತಮಾನ ಸದೃಢ ಸರ್ಕಾರ ರಚಿಸಿ ದೇಶದ ಉಜ್ವಲ ಭವಿಷ್ಯದಲ್ಲಿ ಪಾತ್ರವಾಗಿದೆ. ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು, ಇಂದು ಕೇವಲ ಎರಡು ಜಾತಿಗಳು ಮಾತ್ರ ಉಳಿಯಲಿವೆ. ಒಂದು ಬಡತನ ಮತ್ತೊಂದು ಬಡತನ ನಿರ್ಮೂಲನೆ ಮಾಡಲು ಮುಕ್ತ ಮಾಡುವ ವರ್ಗ. ಹಾಗಾಗಿ ಎರಡೂ ವರ್ಗಗಳಲ್ಲಿ ಮುಂದಿನ ಸರ್ಕಾರ ಶಕ್ತಿ ತುಂಬಿಸಬೇಕಿದೆ. 2019-24ರ ಅವಧಿಯಲ್ಲಿ ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ ಎಂದು ಕೇಳಿಕೊಂಡರು.
ಗಾಂಧಿ-150 ಜನ್ಮದಿನ ಮತ್ತು ಭಾರತದ 75ನೇ ಸ್ವತಂತ್ರ್ಯ ದಿನಾಚರಣೆಯ ಈ ಎರಡೂ ಹಬ್ಬಗಳು 2019-24ರ ಅವಧಿಯಲ್ಲಿ ಬರಲಿವೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸಮೃದ್ಧ ರಾಷ್ಟ್ರವನ್ನಾಗಿ ಮಾಡೋಣ. ಸ್ವತಂತ್ರ ಭಾರತ ಸಮೃದ್ಧ ಭಾರತವನ್ನು ಮಾಡೋಣ ಎಂದು ಹೇಳಿದರು.
ಚುನಾವಣೆಯಲ್ಲಿ ಯಾರು ಏನು ಹೇಳಿದರು ಎನ್ನುವುದು ನಮಗೆ ಬೇಡ. ಎಲ್ಲವೂ ಮುಗಿದು ಹೋಗಿದೆ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗಾಗಿ ನಮ್ಮ ಜೊತೆ ಹೆಜ್ಜೆ ಹಾಕುವವರು ಪ್ರಾಮಾಣಿಕವಾಗಿರಬೇಕು. ದೇಶದ ಅಭಿವೃದ್ಧಿಗೆ ದೇಶದ ಜನತೆ ತಮ್ಮ ಮತಗಳ ಮೂಲಕ ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ ಎಂದು ಮೋದಿ ಹೇಳಿದರು.